ಜೂ.29, ಬೆಂಗಳೂರು : ಗಂಗೆ, ಕೃಷ್ಣಾ, ವೇದಾವತಿಯಂತಹ ನದಿಗಳು ಬತ್ತಿಹೋಗಿ ಬರಗಾಲ ಪೀಡಿಸುತ್ತಿರುವುದು ನಮ್ಮ ದುಸ್ಥರ ಸ್ಥಿತಿಗೆ ಸಾಕ್ಷಿ ಎಂದು ಶ್ರೀಮತಿ ಬಿ.ಟಿ ಲಲಿತಾನಾಯಕ್ ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಜಯ ಕರ್ನಾಟಕ ಸಂಘಟನೆ ಶಾಶ್ವತ ನೀರಾವರಿ ಯೋಜನೆಗಳ ಸಾಧಕ ಬಾಧಕಗಳ ಕುರಿತಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ.ಟಿ ಲಲಿತಾನಾಯಕ್ ರವರು, ಬೇಸಾಯ ಎನ್ನುವುದು ನಾ ಸಾಯ, ನೀ ಸಾಯ, ಮನೆಮಂದಿಯೆಲ್ಲಾ ಸಾಯ ಎನ್ನುವಷ್ಟರ ಮಟ್ಟಿಗೆ ಬಂದುಬಿಟ್ಟಿದೆ. ಇದಕ್ಕೆ ಕಾರಣವಾಗಿರುವುದು ನೀರಿನ ಕೊರತೆ. ದುರಾಸೆಯಿಂದ ನೀರು ನಿಲ್ಲಿಸಿ ಜವಗು ಮಣ್ಣಿನಲ್ಲಿ ಬೆಳೆ ಬೆಳೆಯಲಾಗದೇ ಕೊರಗುವುದನ್ನೂ ಕಾಣುತ್ತಿದ್ದೇವೆ. ಇರುವ ಕಡೆಯಿಂದ ಇಲ್ಲದೆಡೆ ನೀರು ಹರಿಸುವ ಯೋಜನೆಗಳನ್ನು ಸರಕಾರದ ಗಮನಕ್ಕೆ ತಂದು, ರೈತರು ಹಾಗೂ ಸಮಾಜದ ಕಣ್ಣು ತೆರೆಸುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ. ಇದಕ್ಕೆ ಬೇಕಾಗಿ ಎಲ್ಲರೂ ತೊಡಗಿಕೊಂಡು, ದೊಡ್ಡ ಪ್ರಮಾಣದ ಕಾರ್ಯ ನಮ್ಮ ಮನೆಗಳಿಂದಲೇ ಆರಂಭವಾಗಲಿ. ನೀರಿನ ಪುನರ್ಬಳಕೆ, ಅಂತರ್ಜಲ ನಿರ್ವಹಣೆಯಂತಹ ಕಾರ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಮರ್ಶಿಸುವ ಅಲೋಚನೆಯನ್ನು ನಾವೆಲ್ಲಾ ಮಾಡಬೇಕಿದೆ. ಈ ದಿಸೆಯಲ್ಲಿ ನಾವೆಲ್ಲರೂ ಒಬ್ಬೊಬ್ಬ ಭಗೀರಥರಂತೆ ಕಾರ್ಯತತ್ಪರರಾಗೋಣ ಎಂದರು.
ಉದ್ಘಾಟಕರಾದ ಡಾ.ಬಂಜಗೆರೆ ಜಯಪ್ರಕಾಶ್ ರವರು ಮಾತನಾಡಿ, ಬಯಲುಸೀಮೆಯ ಸಮಸ್ಯೆಗಳನ್ನು ಬಗೆಹರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ. ನಲವತ್ತು ವರ್ಷಗಳ ಹಿಂದೆ ಸರ್ಕಾರ ಪ್ರಕಟಪಡಿಸಿದ ಭದ್ರಾ ಮೇಲ್ದಂಡೆ ಯೋಜನೆಯ ಒಂದು ಹಂತದ ಯೋಜನೆಯನ್ನು ಮಾತ್ರ ಅನುಷ್ಠಾನಕ್ಕೆ ತರಲಾಯಿತು. ಹೆಚ್ಚುವರಿ ನೀರಿನ ಸದುಪಯೋಗದ ಕುರಿತಾಗಿ ಆಲೋಚಿಸಿದರೂ 21 ಟಿ.ಎಂ.ಸಿ ನೀರನ್ನು ಬಳಸಬಹುದೆನ್ನುವ ಸೂಚನೆ ದೊರಕಿತು. ಈ ಯೋಜನೆಯಲ್ಲಿ ಲೋಲುಪ ಜೀವನಕ್ಕೆ ಬೇಕಾಗಿ ಆಗುವ ಪರಿಸರ ನಾಶದಷ್ಟು ನಾಶ ಖಂಡಿತಾ ಆಗುವುದಿಲ್ಲ ಎಂದು ತಿಳಿಸಿದರೂ ಯಶಸ್ಸು ಸಿಗಲಿಲ್ಲ. ಮರುಭೂಮಿಯನ್ನು ನಂದನವನವನ್ನು ಮಾಡಿದ ಹಲವು ನಿದರ್ಶನಗಳು ಬೇರೆ ರಾಷ್ಟ್ರದಲ್ಲಿವೆ. ಎತ್ತಿನಹೊಳೆಯೋ, ಮೇಕೆದಾಟು ಯೋಜನೆಯೋ ನಮ್ಮ ಅಪೇಕ್ಷೆಯಾಗಿರದೇ, ಬಯಲುಸೀಮೆಗೆ ನೀರಿನ ಅಪೇಕ್ಷೆ ಮಾತ್ರ ನಮ್ಮದು. ಈಸಿಸೆಯಲ್ಲಿ ಸರ್ಕಾರ ಪ್ರಯತ್ನಿಸಲಿ ಎಂದರು.
ಪ್ರೊ.ಚಂದ್ರಶೇಖರ್ ಪಾಟೀಲ್ ರವರು ಮಾತನಾಡಿ, ಕನ್ನಡಪರ ಸಂಘಟನೆಗಳ ವ್ಯಾಪ್ತಿ ವ್ಯಾಪಕವಾಗಿದ್ದು,ಇಡೀ ಬದುಕೇ ಕನ್ನಡ ಎನ್ನುವ ನಿಟ್ಟಿನಲ್ಲಿ ಅವರು ಹೋರಾಟ ನಡೆಸಬೇಕಾಗುತ್ತದೆ. ಏಕೀಕೃತ ಕರ್ನಾಟಕದಲ್ಲಿ ಸಮಸ್ಯೆಗಳು ಮಾತ್ರ ಇನ್ನೂ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ. ಆ ದೃಷ್ಟಿಯಿಂದ ಜಯ ಕರ್ನಾಟಕ ಕರ್ನಾಟಕದ ಸಮಸ್ಯೆಗಳ ನಿವಾರಣೆಗಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಯಾವುದೇ ಕನ್ನಡದ ಕೆಲಸಕ್ಕೆ ಬರದ ಜನರಿಗಿಂತ ನವೆಂಬರ್ ನಲ್ಲಾದರೂ ಕನ್ನಡದ ಬಗ್ಗೆ ಆಲೋಚಿಸುವ ಕಾರ್ಯಕರ್ತರ ಶ್ರಮವೇ ದೊಡ್ಡದು. ವಿಚಾರ ಸ್ಪಷ್ಟತೆಯ ದೃಷ್ಟಿಯಿಂದ ಈ ರೀತಿಯ ವಿಚಾರ ಮಂಥನಗಳು ಮಹತ್ತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಡಾ.ವಾಸುರವರು ಮಾತನಾಡಿ, ಅಧಿಕಾರ ಕೇಂದ್ರವಾಗಿರುವ, ಮಾಧ್ಯಮ ಕೇಂದ್ರವಾಗಿರುವ ಬೆಂಗಳೂರು ಬಯಲುಸೀಮೆಯೆ ನೆಲ ಹಾಗೂ ಮಾನವ ಸಂಪನ್ಮೂಲದ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಹೆಚ್ಚುವರಿ ನೀರನ್ನು ಬಯಲುಸೀಮೆಗೆ ಒದಗಿಸುವಲ್ಲಿ ಯೋಚನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ರಾಜಾರಾಮ್, ದೀಪಕ್, ಜಗದೀಶ್, ಕುಮಾರಸ್ವಾಮಿ, ಎಸ್.ನಾರಾಯಣ್, ರಾಮಚಂದ್ರ, ಮಂಜುನಾಥ್, ಸುರೇಶ್ ರೈ, ಜಯರಾಮದ, ಹೊನ್ನಪ್ಪ ಇನ್ನಿತರರು ಹಾಜರಿದ್ದರು.