02 ಸಪ್ಟೆಂಬರ್ 2018, ಬೆಂಗಳೂರು:
ಮಹಿಳೆಯರಿಗೆ ಚಿನ್ನಾಭರಣ ಎಂದರೆ ಖುಷಿಯ ಸಂಗತಿ. ಅದರಲ್ಲೂ ವಿಶೇಷ, ವಿನೂತನ ಹಾಗೂ ಹಳೆಯ ವಿನ್ಯಾಸದ ಆಭರಣಗಳು ಎಂದರೆ ಎಲ್ಲಿಲ್ಲದ ಸಂಭ್ರಮ.
ದಕ್ಷಿಣ ಭಾರತದ ಪ್ರಸಿದ್ಧ ಚಿನ್ನಾಭರಣ ಸಂಸ್ಥೆಯಾದ ಎವಿಆರ್ ಜ್ಯೂವೆಲ್ಲರ್ಸ್ ಮಹಿಳೆಯರಿಗಾಗಿ ನವನವೀನ ವಿನ್ಯಾಸದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ತನ್ನ ಬ್ರಾಂಡ್ ಅಂಬಾಸಿಡರ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿಯಾದ ಕೀರ್ತಿ ಸುರೇಶ್ ಅವರ ಗೌರವಾರ್ಥ “ಕೀರ್ತಿ ಸುರೇಶ್ ಸಂಗ್ರಹ” ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದೆ. ಇದರ ಉದ್ಘಾಟನೆಯನ್ನು ಆದಿತ್ಯವಾರದಂದು ಜಯನಗರ ಶಾಖೆಯಲ್ಲಿ ಸ್ವತಃ ಕೀರ್ತಿ ಸುರೇಶ್ ಅವರು ನೆರವೇರಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೀರ್ತಿ ಸುರೇಶ್ ಎವಿಆರ್ ಜ್ಯೂವೆಲ್ಲರ್ಸ್ ಸಂಸ್ಥೆಯ 90 ವರ್ಷಗಳ ಆಭರಣ ವ್ಯಾಪಾರ ಕ್ಷೇತ್ರದಲ್ಲಿನ ಅನುಭವ, ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿ ತನ್ನ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿಶೇಷ ಆಭರಣಗಳನ್ನು ಕೀರ್ತಿ ಸುರೇಶ್ ಪ್ರದರ್ಶಿಸಿದರು ಮತ್ತು ಸಂಸ್ಥೆಯು ಗ್ರಾಹಕರ ಅನುಕೂಲಕ್ಕಾಗಿ ಹೊರತಂದ “ಲುಕ್ ಬುಕ್”ನ್ನು ಬಿಡುಗಡೆಗೊಳಿಸಿದರು.
ಈ ವಿಶೇಷ ಪ್ರದರ್ಶನ ಹಾಗೂ ಮಾರಾಟದ ಅಂಗವಾಗಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೌಲಭವನ್ನು ಕಲ್ಪಿಸಲಾಗಿದೆ. ವಜ್ರಾಭರಣಗಳಿಗೆ ಶೇ.20% ರಿಯಾಯಿತಿ ನೀಡಲಾಗಿದೆ. 8 ಗ್ರಾಂ ಚಿನ್ನ ಖರೀದಿಸಿದರೆ ರೂ. 1,000 ರಿಯಾಯಿತಿ, ಬೆಳ್ಳಿ ಆಭರಣಗಳಿಗೆ ಯಾವುದೇ ವೇಸ್ಟೇಜ್ ಮತ್ತು ತಯಾರಿ ವೆಚ್ಚ ಇರುವುದಿಲ್ಲ. ತಂಜಾವೂರ್, ಚೆನ್ನೈ ಸೇರಿದಂತೆ ವಿವಿಧ ರಾಜ್ಯಗಳ ಓಲೆ, ಡಾಬು, ಬಳೆ, ಉಂಗುರ, ನಕ್ಲೆಸ್ ಸೇರಿದಂತೆ ನೂರಾರು ಬಗೆಯ ವಿನ್ಯಾಸದ ಆಭರಣಗಳು ಇಲ್ಲಿ ದೊರೆಯುತ್ತವೆ.
ಕನ್ನಡ ಚಿತ್ರಗಳಲ್ಲಿ ನಟಿಸಲು ರೆಡಿ:
ದಕ್ಷಿಣ ಭಾರತದ ಮಲಯಾಳಂ, ತಮಿಳು, ತೆಲುಗು ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ಕೀರ್ತಿ ಸುರೇಶ್ ಕನ್ನಡ ಚಿತ್ರಗಳಲ್ಲೂ ನೋಡುವ ಅಭಿಮಾನಿಗಳ ಆಸೆಯ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೀರ್ತಿ ಸುರೇಶ್, ತನ್ನ ತಾಯಿ ಮೇನಕಾ ಅವರು ಡಾ. ರಾಜಕುಮಾರ್ ಅವರೊಂದಿಗೆ “ಸಮಯದ ಗೊಂಬೆ” ಚಿತ್ರದಲ್ಲಿ ನಟಿಸಿದ್ದರು, ಹಾಗೆಯೇ ಉತ್ತಮ ಕಥೆ ಮತ್ತು ಚಿತ್ರತಂಡ ಜೊತೆಯಾದರೆ ಕನ್ನಡ ಚಿತ್ರಗಳಲ್ಲೂ ನಟಿಸಲು ಕಾತುರಳಾಗಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎವಿಆರ್ ಜ್ಯೂವೆಲ್ಲರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಎಸ್. ಸಂಜಯ್, ನಿರ್ದೇಶಕಿ ಸೌಮ್ಯ ಸಂಜಯ್, ನಿರ್ದೇಶಕರಾದ ಎ.ವಿ.ಆರ್. ಸಿದ್ಧಾಂತ್, ಎ.ವಿ.ಆರ್. ಶ್ರೀಸ್ಮರಣ್, ಜಯನಗರ ಶಾಖೆಯ ವ್ಯವಸ್ಥಾಪಕರಾದ ಸಂಗೀತಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಬಹುಭಾಷಾ ನಟಿಯನ್ನು ನೋಡಿ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಎರಡೂ ಶಾಖೆಗಳ ಆವರಣದಲ್ಲಿ ನೆರೆದಿದ್ದರು.
ಈ ವಿಶೇಷ ಪ್ರದರ್ಶನ ಮತ್ತು ಮಾರಾಟ ಬೆಂಗಳೂರಿನ 2 ಶಾಖೆಗಳಾದ ಜಯನಗರ ಮತ್ತು ಡಿಕನ್ಸನ್ ರಸ್ತೆಯಲ್ಲಿರುವ ಆಭರಣ ಮಳಿಗೆಯಲ್ಲಿ ನಡೆಯಲಿದೆ. ಸುಮಾರು 20ಕ್ಕೂ ಹೆಚ್ಚು ವಿಧದ ಆಭರಣಗಳು ಗ್ರಾಹಕರಿಗೆ ಇಲ್ಲಿ ಲಭ್ಯವಾಗಲಿದೆ. ಈ ವಿಶೇಷ ಆಭರಣ ಮಾರಾಟ ಸೌಲಭ್ಯ ಸೆ.2 ರಿಂದ 4 ರವರೆಗೆ ಇರುತ್ತದೆ.
1928ರಲ್ಲಿ ತಮಿಳುನಾಡಿನ ಸಣ್ಣ ಪಟ್ಟಣವೊಂದರಲ್ಲಿ ಆರಂಭವಾದ ಎವಿಆರ್ ಜ್ಯೂವೆಲ್ಲರ್ಸ್ ಇಂದು ದೇಶಾದ್ಯಂತ ಹೆಸರು ಮಾಡಿದ್ದು, ಮಹಿಳೆಯರ ಅಚ್ಚುಮೆಚ್ಚಿನ ಆಭರಣ ಮಳಿಗೆಯಾಗಿದೆ.