ಜೂ.15, 2017, ಮಂಡ್ಯ: ಸ್ಲಂ ಜನರ ಸ್ಥಿತಿಗತಿ ಪರಿಶೀಲನೆಗಾಗಿಯೇ ನಾವು ಜನಸಂಪರ್ಕ ಸಭೆಯನ್ನು ಆಯೋಜಿಸಿ ಆಯಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಹೇಳಿದರು.
ಮಂಡ್ಯದ ತಮಿಳು ಕಾಲೋನಿ ನೆಹರೂ ನಗರದ ಮುತ್ತುಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಿ.ಜೆ.ಪಿ.ಯ ಸ್ಲಂ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ನಮ್ಮ ಸರ್ಕಾರ ಮುಂದೆ ಆಡಳಿತಕ್ಕೆ ಬಂದಾಗ ನಿಮ್ಮ ಸಮಸ್ಯೆಗಳನ್ನು ಆಲಿಸುವ ಬದಲು ಮುಂಚೆಯೇ ಜನರ ಸಮಸ್ಯೆಗಳನ್ನು ತಿಳಿದುಕೊಂಡರೆ ಇಲ್ಲಿನ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಬಹುದು ಎನ್ನುವ ಕಾರಣಕ್ಕಾಗಿ ಭೇಟಿ ನೀಡುತ್ತದ್ದೇವೆ. ಅನ್ನಭಾಗ್ಯದಂತಹ ಹಲವು ಯೋಜನೆಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪಾಲು ರಾಜ್ಯ ಸರ್ಕಾರಕ್ಕಿಂತ ಹೆಚ್ಚಿದೆ. ಹಾಗಾಗಿ ಯೋಜನೆಗಳಲ್ಲಿ ಬಿ.ಜೆ.ಪಿ.ಯ ಪಾತ್ರವನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ. ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳಲ್ಲಿ ಇಂತಹ ಇಲ್ಲಿಯ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಆಗದ ಸರ್ಕಾರಕ್ಕಿಂತ ಅಧಿಕಾರಕ್ಕೆ ಬರುವ ಮೊದಲೇ ನಿಮ್ಮ ಸಮಸ್ಯೆಗಳನ್ನು ಆಲಿಸಲು ಬರುವ ಬಿ.ಜೆ.ಪಿ. ಸರ್ಕಾರವೇ ಮೇಲು ಎನ್ನುವುದನ್ನು ಜನತೆ ಅರ್ಥಮಾಡಿಕೊಳ್ಳಬೇಕಿದೆ. ಇದೆಲ್ಲವನ್ನೂ ತಿಳಿದ ಜನತೆ ಮುಂದಾದರೂ ಬಿ.ಜೆ.ಪಿ.ಯ ಮಹತ್ತ್ವವನ್ನು ತಿಳಿದು ಮತನೀಡಿ ಬಡವರು ಸಹ ನೆಮ್ಮದಿಯಿಂದ ಬದುಕುವ ದಿನ ಬರಲಿ ಎಂದು ಜನಪರ ಕಾಳಜಿ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ. ಸೋಮಶೇಖರ್ ರವರು ಮಾತನಾಡಿ, ಸ್ಲಂ ಜನರ ಸಂಕಷ್ಟ ನಮ್ಮ ಗಮನದಲ್ಲಿದೆ. ಈ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಕ್ಕಾಗಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಲ್ಲಿ ಖಂಡಿತವಾಗಿ ಹೋರಾಟ ನೆಡೆಸುತ್ತಾರೆ. ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷ ನೆಡೆಸಬೇಕಿದ್ದ ಅಭಿವೃದ್ಧಿ ಕಾರ್ಯವನ್ನು ನಮ್ಮ ಸರ್ಕಾರಕ್ಕೆ ಜನಬೆಂಬಲ ದೊರಕಿದಲ್ಲಿ ಮಾಡಲು ಬದ್ಧವಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬಿಜೆಪಿ ನಾಯಕರಾದ ತೇಜಸ್ವಿನಿ ಗೌಡ, ಕೆ.ಶಿವರಾಮ್, ವೆಂಕಟೇಶ್, ಜಗನ್ನಾಥ್ ಶೆಟ್ಟಿ, ಆರ್ಗಾನಿಕ್ ಮಧು ಚಂದನ್ ಇನ್ನಿತರರು ಹಾಜರಿದ್ದರು.