Sunday, 8th September 2024
 
Advertise With Us | Contact Us

ಅನಂತಪುರದ ಅನಂತಪದ್ಮನಾಭ ದೇವಸ್ಥಾನ

ಸುತ್ತಲೂ ನೀರು ತುಂಬಿದ ಕೆರೆ. ದೂರದಿಂದ ನೋಡುವಾಗ ಅದೊಂದು ಸುಂದರ ಕೃತಕ  ದ್ವೀಪವೆಂಬ ಭಾವನೆ ಮೂಡುತ್ತದೆ. ಆದರೆ ಅದು ಅನಂತಪುರದ ಅನಂತಪದ್ಮನಾಭ ದೇವಸ್ಥಾನವೆಂದು ತಿಳಿದದ್ದು ಅಲ್ಲಿಗೆ ಭೇಟಿಯಿತ್ತಾಗಲೇ..! ಮಂಗಳೂರಿನಿಂದ ಸುಮಾರು 39 ಕಿ.ಮೀ ದೂರವಿರುವ ಕುಂಬ್ಳೆಯಿಂದ ಬದಿಯಡ್ಕ ಮಾರ್ಗವಾಗಿ ಸುಮಾರು ನಾಲ್ಕು ಕಿಲೋಮೀಟರ್ ಸಾಗಿದಾಗ ಅನಂತಪುರ ದೇವಸ್ಥಾನವು ನಮ್ಮನ್ನು ಕೈಬೀಸಿ ಕರೆಯುತ್ತದೆ!. ಬೇಡಿದ ವರವನ್ನು ಕರುಣಿಸುವ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಅನಂತಪದ್ಮನಾಭ ದೇವರು ಇಲ್ಲಿ ನೆಲೆಸಿದ್ದಾನೆ. ತಿರುವಂತಪುರದ ಅನಂತಪದ್ಮನಾಭ ದೇವಳಕ್ಕೆ ಇದು ಮೂಲ ಸ್ಥಾನವೆಂಬುದು ಪುರಾಣ ಕಥೆಗಳಲ್ಲಿ ಕಾಣಬಹುದು. ಮಾತ್ರವಲ್ಲದೆ, ಕೆರೆಯ ಬದಿಯಲ್ಲಿ ಒಂದು ಸುರಂಗ ಮಾರ್ಗವೂ ಇದ್ದು, ಈ ಸುರಂಗದ ಮೂಲಕ ತಿರುವನಂತಪುರದ ದೇವಸ್ಥಾನ ತಲುಪಬಹುದು ಎಂದು ಪ್ರತೀತಿ. ದೇವಸ್ಥಾನದಲ್ಲಿ ಸಾಮಾನ್ಯವಾಗಿ ವಿಗ್ರಹವು ಕಲ್ಲಿನಿಂದಲೋ, ಲೋಹದಿಂದಲೋ ಕೆತ್ತಲ್ಪಟ್ಟಿರುವುದು ನಮಗೆ ಅರಿವಿರುವ ಸಂಗತಿ ಎಂದರೆ ತಪ್ಪಾಗಲಾರದು. ಆದರೆ ಇಲ್ಲಿನ ದೇವರ ಮೂರ್ತಿಯು ಸಂಪೂರ್ಣವಾಗಿ ಆಯುರ್ವೇದದ ಗಿಡಮೂಲಿಕೆಗಳಿಂದ, ವಿವಿಧ ದ್ರವ್ಯಗಳ ಲೇಪನದಿಂದ ತಯಾರಿಸಿದ್ದಾಗಿದೆ. ಇದಕ್ಕೆ ’ಕಡುಶರ್ಕರ ಪಾಕ’ದ ವಿಗ್ರಹ ಎಂದು ಹೆಸರು!

ಇದೇನಿದು ಕಡುಶರ್ಕರ ಪಾಕ ಎಂದರೆ ? ‘ಕಠಿಣವಾದ ಪಾಕ’ವೇ ಈ ಕಡುಶರ್ಕರ ಪಾಕ. ಇದುವೇ ’ವಿಗ್ರಹ’ ನಿರ್ಮಾಣದ ಮೂಲವೂ ಕೂಡ! ಶರ್ಕರ ರೂಪದಲ್ಲಿರುವ ಹತ್ತು ಹಲವು ಮಿಶ್ರಣಗಳು ಇದರ ಕಚ್ಚಾವಸ್ತುಗಳು! ಮುನಿ ಶ್ರೇಷ್ಠರ ನಿರ್ಮಾಣದ ವಿಧಾನವಿದು. ಶಿಲ್ಪಿಗಳು ವಿಗ್ರಹವೇ ಮನುಷ್ಯನ ಪ್ರತಿರೂಪವೆಂದು ಭಾವಿಸಿ ಮಾನವ ದೇಹದ ಪ್ರತಿಯೊಂದು  ಭಾಗಗಳನ್ನು ವಿಗ್ರಹದಲ್ಲಿ ಮೂಡಿಸುತ್ತಾರೆ. ಮಾನವನ ಎಲ್ಲಾ ಭಾಗಗಳು ಈ ವಿಗ್ರಹದಲ್ಲಿ ಕಾಣಬಹುದು! ಮಾತ್ರವಲ್ಲದೆ ಗರ್ಭಗುಡಿಯಲ್ಲಿಯೇ ಈ ಮೂರ್ತಿಯನ್ನು ತಯಾರಿಸಿದ್ದು ಇನ್ನೊಂದು ವಿಶೇಷ. ಸುಮಾರು ’೬೯ ನಾನಾ ಬಗೆಯ,ಮಣ್ಣು ಮತ್ತು ಗಿಡಮೂಲಿಕೆಗಳ ಲೇಪನದಿಂದ ಈ ಮೂರ್ತಿಯನ್ನು ರಚಿಸಲಾಗಿದೆ. ಹಿಮಾಲಯ, ಕಾಶಿ, ಇತ್ಯಾದಿ ಪುಣ್ಯಸ್ಥಳಗಳ ಮಣ್ಣು, ಅಂತೆಯೇ ಆನೆ ಕುಟ್ಟಿದ ಮಣ್ಣು, ಬಸವ ಕುಟ್ಟದ ಮಣ್ಣು ಹೀಗೆ ಅನೇಕ ವಿಶೇಷತೆಯನ್ನು ಹೊಂದಿರುವ ಮಣ್ಣಿನಾಂಶವು ಈ ಮೂರ್ತಿಯಲ್ಲಿದೆ’ ಎಂಬುದು ಇಲ್ಲಿನ ಅರ್ಚಕರ ಮಾತು. ವಿಗ್ರಹದ ನರಮಂಡಲ ಹಾಗೂ ಇತರೆ ಮಾನವನ ಭಾಗಗಳು ಸಿದ್ದವಾದ ಬಳಿಕ ವಿವಿಧ ಮಣ್ಣಿನ ಲೇಪನಗಳು ಆರಂಭಗೊಳ್ಳುತ್ತದೆ. ಲೇಪನಕ್ಕೆ ಯಾವುದೇ ರೀತಿಯ ಅನ್ಯ ಪದಾರ್ಥಗಳೂ ಸೇರುವಂತಿಲ್ಲ! ಲೇಪನವಾದಂತೆಯೇ ವಿಗ್ರಹಕ್ಕೆ ಬಣ್ಣಬುರುವುದು ನಮಗೊಂದು ಹೊಸ ವಿಷಯ! ಈ ಮೂರ್ತಿಯ ಜೊತೆಗೆ ಇಲ್ಲಿ ಹನುಮಂತ, ಗರುಡ, ಭೂದೇವಿ, ಶ್ರೀದೇವಿಯ ಮೂರ್ತಿಗಳೂ ಪೂಜಿಸಡುತ್ತಿದೆ. ದೇವಾಲಯದ ವಿಗ್ರಹಗಳು ನಿಸರ್ಗದಾದುದರಿಂದ ಈ ವಿಗ್ರಹಗಳಿಗೆ ಯಾವುದೇ ರೀತಿಯ ಅಭಿಷೇಕ, ಅರ್ಚನೆಗಳು ಇಲ್ಲ! ಅದಕ್ಕೆಂದು ಬೇರೆ ಚಿನ್ನದ ವಿಗ್ರಹವಿರುವುದಾಗಿ ತಿಳಿಸಿದ್ದು ಸ್ಥಳಿಯರು! ಅಂತೆಯೇ ಗರ್ಭ ಗುಡಿಯ ಒಳಗೆ ಅನೇಕ ದೇವತೆಯರ ಭಿತ್ತಿ ಚಿತ್ರಗಳು ಇವೆ. ಆದರೆ ಇದನ್ನು ಭಕ್ತಾದಿಗಲು ನೋಡಲು ಅವಕಾಶವಿಲ್ಲದಿರುವುದು ನಮ್ಮ ಧೌರ್ಭಾಗ್ಯ. ’ಇದು ಕೂಡ ಪ್ರಕೃತಿ ದತ್ತವಾದ, ಅನೇಕ ಜೈವಿಕ ಬಣ್ಣಗಳಿಂದ ಬಿಡಿಸಿದಂತಹದ್ದು’ ಎಂದು ಇಲ್ಲಿನ ಅರ್ಚಕರು ತಿಳಿಸಿಕೊಟ್ಟದ್ದು ನಮ್ಮ ಭಾಗ್ಯವೇ ಸರಿ ಅಲ್ಲವೇ?

ದೇವರ ಮೊಸಳೆ ಬಬಿಯಾ ..! ಹಲವಾರು ದೇವಸ್ಥಾನಗಳಲ್ಲಿ ದೇವರ ಆನೆ, ಬಸವ ಇತ್ಯಾದಿ ಪ್ರಾಣಿಗಳಿಗಳಿರುವುದು ನಮಗೆ ತಿಳಿದ ವಿಚಾರ. ಆದರೆ ಈ ದೇವಾಲದ ಕೆರೆಯ ನಡುವಿನಲ್ಲಿ ನೆಲೆಸಿರುವ ’ಅನಂತಪದ್ಮಾನಾಭನಿಗೆ ಮೊಸಳೆ-ಬಬಿಯಾ’ ’ಕಾವಲು ಕಾಯುವ ಕೆಲಸ’ ಮಾಡುತ್ತದೆ! ಅಂದರೆ ಈ ದೇವರ ಕೆರೆಯಲ್ಲೊಂದು ’ದೇವರ ಮೊಸಳೆ ಇರುವುದು ಈ ಕ್ಷೇತ್ರದ ವಿಶೇಷತೆ! ವರ್ಷದ ಎಲ್ಲಾ ದಿನವೂ ಶುದ್ಧ ನೀರಿನಿಂದ ತುಂಬಿರುವ ಈ ಕೆರೆಯಲ್ಲಿ ಒಂದು ಮೊಸಳೆಯೂ ಕೂಡ ಇಲ್ಲೇ ವಸವಾಗಿರುತ್ತದೆ. ದೇವರ ನೈವೇಧ್ಯವೇ ಇದಕ್ಕೆ ನಿತ್ಯ ಆಹಾರ! ಸುಮಾರು 1 ಗಂಟೆಗೂ ಮೊಸಳೆಗೋಸ್ಕರ ಕಾದು ಕುಳಿತು, ’ಇಲ್ಲಿ ಮೊಸಳೆಯೇ ಇಲ್ಲ’ವೆಂದುಕೊಳ್ಳುವಷ್ಟರಲ್ಲಿ ನಮಗೆ ಮೊಸಳೆಯ ದರ್ಶನ ಭಾಗ್ಯ ಸಿಕ್ಕಿಯೇ ಚಿಟ್ಟಿತು! ಅಂದ ಹಾಗೆ ಈ ಮೊಸಳೆಯು ಸ್ಥಳೀಯರಿಗೆ ಸ್ನೇಹಿತನಿದ್ದಂತೆ! ’ಬಬಿಯಾ’ ಎಂದು ಕರೆದರೆ ಪ್ರತ್ಯಕ್ಷ! ಹಾಗೆಯೇ ಭಕ್ತಾದಿಗಳು ಕೊಟ್ಟ ತಿಂಡಿಗಳನ್ನೂ ಇದು ’ಸ್ವಾಹ’ವೆನಿಸುವುದು ಆಶ್ಚರ್ಯಕರ! ’ಮೊಸಳೆಯು ನಮಗೆ ಕಾಣ ಸಿಕ್ಕಿತು’ ಎಂದು ಸಂತಸದಿಂದ ಹೇಳಿದ ನಮಗೆ ಸ್ಥಳೀಯ ಬ್ರಾಹ್ಮಣರೊಬ್ಬರು ’ನೀವು ಮೊಸಳೆಯನ್ನು ಕಂಡದ್ದು ದೊಡ್ಡ ವಿಶೇಷವಲ್ಲ, ಬಬಿಯಾ ನಿಮ್ಮನ್ನು ಕಂಡು ಹರಸಿದ್ದು ನಿಮ್ಮ ಭಾಗ್ಯ’ ಎಂದಾಗ ಆ ಕ್ಷೇತ್ರದ ಮಹತ್ವವು ನಮಗೆ ಗೋಚರವಾಯಿತು! ಜೊತೆಗೆ ಭಕ್ತಿಯಿಂದ ಕೈಮುಗಿದು ಪ್ರಾರ್ಥಿಸಿದರೆ ಇಷ್ಠಾರ್ಥಗಳೆಲ್ಲವೂ ಈಡೆರುತ್ತದೆ ಎಂದೂ ತಿಳಿಸಿದರು. ಹತ್ತಿರದಲ್ಲಿ ಶ್ರೀ ಮಹಾಗಣಪತಿಯ ಗುಡಿಯನ್ನು ಕಾಣಬಹುದು. ಇಲ್ಲಿ ಪುರಾತನ ಕಾಲದ ತುಳುಶಾಸನವನ್ನೂ ಕಾಣಬಹುದು. ಇದು ದೇವಾಲಯ ಎಷ್ಟು ಪುರಾತನವಾದದ್ದು ಎಂಬುದಕ್ಕೆ ಪುಷ್ಠಿಕೊಡುತ್ತದೆ. ಪ್ರಧಾನ ದೇವಾಲಯದ ಬದಿಯಲ್ಲಿಯೇ ಗೋಶಾಲಕೃಷ್ಣ ದೇವರು, ಅಂತೆಯೇ ಕೊಂಚ ದೂರದಲ್ಲಿ ರಕ್ತೇಶ್ವರಿ ಗುಡಿಯನ್ನೂ ಕಾಣಬಹುದು. ಹಾಗೆಯೇ ಶ್ರೀ ವನಶಾಸ್ತಾರ ಗುಡಿಯೂ ಇದೆ. ಈ ಗುಡಿ ಬಳಿಯೇ ಇನ್ನೊಂದು ಸಣ್ಣ ಕೆರೆ ಕಾಣಬಹುದು. ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಸಾಗುತ್ತಾ ಸ್ವಚ್ಚಂದವಾಗಿ ಜೀವನ ನಡೆಸುತ್ತಿದೆ. ಹಾಗೆಂದು ಇದುವರೆಗೂ ಯಾರಿಗೂ ನೋವನ್ನುಂಟು ಮಾಡಿದ ಘಟನೆಗಳೇ ಇಲ್ಲವೆಂದು ಗ್ರಾಮಸ್ಥರ ಹೇಳಿಕೆ! ಇಂತಹ ದಿವ್ಯ ಸಾನ್ಧ್ಯಕ್ಕೆ, ಜೀವನದಲ್ಲಿ ಒಮ್ಮೆಯಾದರೂ ಬೇಟಿಕೊಡುವುದರಿಂದ, ನಿತ್ಯ ಕೆಲಸಗಳಿಳದ ಬಳಲಿದ ನಮಗೆ ಮನಸ್ಸಿಗೆ ನೀಡುವ ಮುದ ಅಷ್ಟಷ್ಟಲ್ಲ. ಅಂತೆಯೇ ನಮ್ಮ ನೆನೆಸಿದ ಕಾರ್ಯಗಳು ಸಾಂಗವಾಗಿ ನೆರೆವೇರಬಹುದು ಎಂದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085