Thursday, 25th April 2024
 
Advertise With Us | Contact Us

ಬೆಳೆ ಸಾಲಮನ್ನಾ: ಮೇ 30 ರಂದು ರೈತ ಸಂಘಟನೆಗಳು ಹಾಗೂ ಪ್ರಗತಿಪರ ರೈತರ ಜೊತೆ ಮುಖ್ಯಮಂತ್ರಿ ಸಮಾಲೋಚನಾ ಸಭೆ

ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ರೈತರ ಬೆಳೆ ಸಾಲಮನ್ನಾ, ರೈತರ ಆತ್ಮಹತ್ಯೆ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಪ್ರಾರಂಭಕ್ಕೆ ಪೂರಕ ವಾತಾವರಣ ಕಲ್ಪಿಸುವ ಕುರಿತಂತೆ ಮೇ 30 ರಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರೈತ ಸಂಘಟನೆಗಳು ಹಾಗೂ ಪ್ರಗತಿಪರ ರೈತರ ಜೊತೆ ಸಮಾಲೋಚನಾ ಸಭೆ ನಡೆಯಲಿದೆ.

ಇದು ಅನ್ನದಾನ ಸಂಕಷ್ಟಕ್ಕೆ ಸ್ಪಂದಿಸುವತ್ತ ನೂತನ ಸರ್ಕಾರದ ಮೊದಲ ಹೆಜ್ಜೆಯಾಗಿದೆ. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಪ್ರತಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಈ ಸಭೆಗೆ ವಿಶೇಷವಾಗಿ ಆಮಂತ್ರಿಸಲಾಗಿದೆ.

ಸಂಪುಟ ಸಭೆ
ಈ ಮುನ್ನ ಅದೇ ದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದೆ.

ಸಭೆ-ಚರ್ಚೆ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಹಣಕಾಸು ಇಲಾಖೆ ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಮೊದಲ ಸಭೆಯಲ್ಲಿ ರಾಜ್ಯ ಆರ್ಥಿಕ ಸ್ಥಿತಿಯ ಕುರಿತಂತೆ ಮಾಹಿತಿ ಪಡೆದರು.

ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೈತರ ಸಮಸ್ಯೆ ಅರಿತು ಅವುಗಳಿಗೆ ಪರಿಹಾರ ಕಂಡು ಹಿಡಿಯಲು ಬುಧವಾರ ಹಮ್ಮಿಕೊಳ್ಳಲಾದ ಸಭೆಗೆ ರಾಜ್ಯದ ಪ್ರತಿ ಜಿಲ್ಲೆಯಿಂದಲೂ ಕನಿಷ್ಠ ನಾಲ್ಕು ಮಂದಿ ಪ್ರಗತಿಪರ ರೈತರನ್ನು ಕರೆತರಲು ಮುಖ್ಯಮಂತ್ರಿ ಸೂಚಿಸಿದರು.

ಯಶಸ್ವಿನಿಯ ಯಶಸ್ಸು ಮುಂದರಿಕೆಗೆ ಅಗತ್ಯ ಕ್ರಮ
ರಾಜ್ಯದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ರೈತರಿಗೆ ಆರೋಗ್ಯ ವಿಮೆ ಕಲ್ಪಿಸುವ ಯಶಸ್ವಿನಿ ಯೋಜನೆಯ ವೇಗ ಕಡಿಮೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಯೋಜನೆಗಳನ್ನು ಸಮೀಕರಿಸಿ ಯಶಸ್ವಿನಿ ಯೋಜನೆಯ ಯಶಸ್ಸು ಮತ್ತು ಲಾಭವನ್ನು ರೈತ ಸಮುದಾಯಕ್ಕೆ ವಿಸ್ತರಿಸುವತ್ತ ಹಾಗೂ ಮುಂದುವರೆಸುವತ್ತ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು ಹಾಗೂ ಕೃಷಿ ಉತ್ಪನ್ನ ಆಯುಕ್ತರೂ ಆದ ಡಿ ವಿ ಪ್ರಸಾದ್, ಹಣಕಾಸು ಇಲಾಖೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್, ಮುಖ್ಯಮಂತ್ರಿಯರ ಅಪರ ಮುಖ್ಯ ಕಾರ್ಯದರ್ಶಿ ಎಂ ಲಕ್ಷ್ಮೀನಾರಾಯಣ, ಶ್ರೀ ಜಯದೇವ ಹೃದಯ ವಿಜ್ಞಾನಗಳು ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಗಳಲ್ಲಿ ಹಾಜರಿದ್ದರು.

ಮೊದಲ ಜನತಾ ದರ್ಶನ
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವ ತಮ್ಮ ಮೊದಲ ಜನತಾ ದರ್ಶನಕ್ಕೆ ಇಲ್ಲಿ ಇಂದು ಚಾಲನೆ ನೀಡಿದರು. ಮೊದಲ ದಿನವೇ 125 ಕ್ಕೂ ಹೆಚ್ಚು ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ವೈದ್ಯಕೀಯ ನೆರವು ಬಯಸಿದ ವ್ಯಕ್ತಿಗಳು, ಸ್ವಾವಲಂಭಿ ಜೀವನ ನಡೆಸಲು ಆಸರೆ ಆಶಿಸಿದ ಆಗಮಿಸಿದ ವಿಕಲ ಚೇತನರು, ಭೂ-ರಹಿತರು ಹಾಗೂ ಜಮೀನು ಕಳೆದುಕೊಂಡವರು ಸರ್ಕಾರದ ಸಹಾಯ ಹಸ್ತ ಬಯಸಿ ಬಂದವರನ್ನು ಕಂಡ ಮುಖ್ಯಮಂತ್ರಿ ಮರುಗಿದರಲ್ಲದೆ ಕೆಲವು ಪ್ರಕರಣಗಳಲ್ಲಿ ಸಂಬಂಧಿತ ಜಿಲ್ಲಾಧಿಕಾರಿಗಳೊಡನೆ ಅಲ್ಲಿಂದಲೇ ದೂರವಾಣಿಯ ಮೂಲಕ ಮಾತನಾಡಿ ಕೂಡಲೇ ಸ್ಪಂದಿಸುವಂತೆ ಸೂಚಿಸಿದರು.

ಅರ್ಜಿ ಸಲ್ಲಿಸಿದವರಿಗೆ ಜನತಾ ದರ್ಶನ ಕೋಶದ ಮೂಲಕ ಹತ್ತು ದಿನಗಳೊಳಗೆ ಪರಿಹಾರ ಕಲ್ಪಿಸುವ ಅಥವಾ ಅರ್ಜಿಯ ಸ್ಥಿತಿ-ಗತಿಯ ತಿಳಿಸಿ ಹಿಂಬರಹ ಒದಗಿಸುವ ವ್ಯವಸ್ಥೆಯನ್ನು ರೂಪಿಸಿ ಬಲಪಡಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

ಜನತಾ ದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ತಿನ್ನಲು ಬಿಸ್ಕತ್ತು, ಕುಡಿಯಲು ನೀರು, ಕಾಫಿ, ಚಹಾ, ಮಜ್ಜಿಗೆ ಕೊಡುವ ವ್ಯವಸ್ಥೆ ಇದ್ದದ್ದು ವಿಶೇಷವಾಗಿತ್ತು.

ಕಲುಷಿತ ನೀರು ಪ್ರಕರಣ: ಗಾರ್ಮೆಂಟ್ಸ್ ಕಾರ್ಖಾನೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚನೆ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಬೋರಗುಂಟೆ ಗ್ರಾಮದಲ್ಲಿನ ಖಾಸಗಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ನೀರು ಕುಡಿದು ಅಸ್ವಸ್ಥಗೊಂಡಿದ್ದ 65 ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಯವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವವರೆಗೂ ಕಾರ್ಖಾನೆಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಿದರು.

ಕರಾವಳಿಯಲ್ಲಿ ಮಳೆ
ದಕ್ಷಿಣ ಕನ್ನಡ, ಉಡುಪಿ ಒಳಗೊಂಡಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿನ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕರಾವಳಿ ಕಾವಲು ಪಡೆ ( ಕೋಸ್ಟ್ ಗಾರ್ಡ್ ) ನೊಂದಿಗೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಅಭಿನಂದನೆ !
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ ರಾ ಗೋವಿಂದು ಅವರ ನೇತೃತ್ವದ ನಿಯೋಗ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ ಎ ನಾರಾಯಣ ಗೌಡ ಮತ್ತು ಸಂಗಡಿಗರು, ರಾಜ್ಯ ವಿಧಾನ ಪರಿಷತ್‍ನ ಮಾಜಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಪಿ ರಾಮಯ್ಯ ಅವರೂ ಒಳಗೊಂಡಂತೆ ಹಲವು ಗಣ್ಯರು ಮತ್ತು ಸಾರ್ವಜನಿಕರು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು.

 

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085