ಬೆಂಗಳೂರು, ಆಗಸ್ಟ್ 17 ( ಕರ್ನಾಟಕ ವಾರ್ತೆ )
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವತ್ತ ಶೀಘ್ರವೇ ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆಯ ಆಯುಕ್ತರಾದ ಎಸ್.ಎನ್. ಸಿದ್ದರಾಮಪ್ಪ ಅವರು ಇಲ್ಲಿ ಇಂದು ಪ್ರಕಟಿಸಿದರು.
ಎಲ್ಲಾ ಜಿಲ್ಲಾ ವಾರ್ತಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಮಂಜೂರಾಗಿರುವ 565 ಹುದ್ದೆಗಳ ಪೈಕಿ ಅರ್ಧಕ್ಕೂ ಹೆಚ್ಚು ವಿವಿಧ ವೃಂದದ ಹುದ್ದೆಗಳು ಅಂದರೆ 255 ಹುದ್ದೆಗಳು ಖಾಲಿ ಇದೆ. ಆದಕಾರಣ ಸರ್ಕಾರದ ಅಪೇಕ್ಷೆ ಮತ್ತು ನಿರೀಕ್ಷೆಗೆ ಅನುಗುಣವಾಗಿ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹುದ್ದೆಗಳ ಭರ್ತಿ ಅನಿವಾರ್ಯವಾಗಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಇಲಾಖೆಯನ್ನು ಸಧೃಡಗೊಳಿಸುವತ್ತ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು.
ಇಲಾಖೆಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ಕ್ರಮವಹಿಸುವುದಾಗಿ ಭರವಸೆ ನೀಡಿದ ಎಸ್. ಎನ್. ಸಿದ್ದರಾಮಪ್ಪ ಅವರು, ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯಕ್ಷೇತ್ರ ಮತ್ತು ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.