Thursday, 18th April 2024
 
Advertise With Us | Contact Us

ಕಾರಾಗೃಹ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ವರ್ಗಾವಣೆ: ಒಂದು ಸ್ಪಷ್ಟೀಕರಣ

ಬೆಂಗಳೂರು, ಜುಲೈ 17 ( ಕರ್ನಾಟಕ ವಾರ್ತೆ) :
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಅಕ್ರಮಗಳು ನಡೆದಿವೆ ಎಂದು ಇತ್ತೀಚೆಗೆ ಕಾರಾಗೃಹಗಳ ಉಸ್ತುವಾರಿ ಹೊತ್ತಿದ್ದ ಡಿಐಜಿ ಡಿ.ರೂಪಾ ಅವರು ಇಲಾಖೆಗೆ ವರದಿಯನ್ನು ನೀಡಿದ್ದರು. ವರದಿಯಲ್ಲಿನ ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ವರದಿಯನ್ನು ಒಂದು ವಾರದ ಅವಧಿಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದ್ದು ಸಮಗ್ರ ವರದಿ ಸಲ್ಲಿಕೆಗೆ ಒಂದು ತಿಂಗಳ ಗಡುವು ನೀಡಲಾಗಿದೆ.

ಇಡೀ ಪ್ರಕರಣದಲ್ಲಿ ಇಲಾಖಾ ನಿಯಮಾವಳಿಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕಾದ ಹೊಣೆ ಹಿರಿಯ ಅಧಿಕಾರಿಗಳಾದ ಡಿಐಜಿ ಡಿ. ರೂಪಾ ಹಾಗೂ ಬಂಧೀಖಾನೆಗಳ ಮುಖ್ಯಸ್ಥರಾದ ಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಅವರದ್ದಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಸೇವಾ ನಡಾವಳಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ದಿ.14.07.2017ರಂದು ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆ ನಂತರದ ಬೆಳವಣಿಗೆಯಲ್ಲಿ ಇಬ್ಬರು ಅಧಿಕಾರಿಗಳೂ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೇಂದ್ರ ಕಾರಾಗೃಹದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು.

ಡಿಐಜಿ ಹಾಗೂ ಡಿಜಿಪಿಯವರು ಸೇವಾ ನಿಯಮಾವಳಿಗಳಿಗೆ ಬದ್ಧರಾಗಿ ತನಿಖೆಗೆ ಸಹಕರಿಸುವ ನಿಟ್ಟಿನಿಲ್ಲಿ ಗಮನಹರಿಸದೆ ಸಾರ್ವಜನಿಕವಾಗಿ ಒಬ್ಬರು ಮತ್ತೊಬ್ಬರ ವಿರುದ್ಧ ಹೀಗಳಿಕೆಗೆ ತೊಡಗಿದ್ದು ಇಲಾಖಾ ನಿಯಮಾವಳಿಗಳಿಗೆ ವ್ಯತಿರಿಕ್ತವಾಗಿತ್ತಲ್ಲದೆ ಇಲಾಖೆಯ ಘನತೆಗೆ ಕುಂದುಂಟು ಮಾಡುವಂಥದ್ದಾಗಿತ್ತು. ಪ್ರಕರಣದ ತನಿಖೆಯ ವೇಳೆ ಅನಗತ್ಯ ಆರೋಪ, ಪ್ರತ್ಯಾರೋಪಗಳಿಂದ ಒತ್ತಡ ನಿರ್ಮಾಣವಾಗಬಾರದು ಎನ್ನುವ ಮುನ್ನೆಚ್ಚರಿಕೆಯನ್ನಿರಿಸಿಕೊಂಡು ಸರ್ಕಾರವು ಡಿಐಜಿ ಡಿ. ರೂಪಾ ಅವರನ್ನು ತತ್‍ಕ್ಷಣದಿಂದ ಜಾರಿಗೆ ಬರುವಂತೆ ಸಂಚಾರ ಮತ್ತು ರಸ್ತೆ ಸುರಕ್ಷಾ ವಿಭಾಗದ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.

ಡಿಜಿಪಿ ಎಚ್. ಎನ್. ಸತ್ಯನಾರಾಯಣ ರಾವ್ ಅವರನ್ನು ಕಡ್ಡಾಯ ರಜೆಯಲ್ಲಿರುವಂತೆ ಆದೇಶಿಸಲಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ತನಿಖೆಯು ಸುಗಮವಾಗಿ, ನಿಷ್ಪಕ್ಷಪಾತವಾಗಿ ನಡೆಯಲು ಸಹಕಾರಿಯಾಗಲಿದ್ದು, ಸತ್ಯಾಸತ್ಯತೆಯು ಹೊರಬರಲಿದೆ. ವರದಿಯನ್ನಾಧರಿಸಿ ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಡಿ.ಪಿ.ಎಂ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085