ಬೆಂಗಳೂರು, ಜುಲೈ 5 ( ಕರ್ನಾಟಕ ವಾರ್ತೆ):
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ, ಮಲಪ್ರಭ ಹಾಗೂ ತುಂಗ-ಭದ್ರಾ ಪ್ರದೇಶಗಳಲ್ಲಿ 60 ದಿನಗಳೊಳಗಾಗಿ ಮೋಡ ಬಿತ್ತನೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಪ್ರಸಕ್ತ ಸಾಲಿನ ಜೂನ್ ಮಾಸಾಂತ್ಯವರೆಗೆ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಹೊಯ್ಸಳ ಪ್ರಾಜೆಟ್ ಪ್ರೈವೇಟ್ ಲಿಮಿಟೆಡ್ ಮೂಲಕ 30 ಕೋಟಿ ರೂ ವೆಚ್ಚದಲ್ಲಿ ಮೋಡ ಬಿತ್ತನೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಭಿವೃದ್ಧಿ ಆಯುಕ್ತರಿಗೆ ಸಂಪುಟ ನಿರ್ದೇಶನ ನೀಡಿದೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರು ಮೋಟ ಬಿತ್ತನೆ ಕಾರ್ಯದ ಉಸ್ತುವಾರಿ ವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಚೆನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್ ಯೋಜನೆ ಅಡಿ ತುಮಕೂರು ಕೈಗಾರಿಕಾ ನೋಡ್‍ನ ತುಮಕೂರು ವಸಂತ ನರಸಾಪುರ ನಾಲ್ಕನೇ ಹಂತದ ಭೂ ಸ್ವಾಧೀನಕ್ಕೆ ರಾಜ್ಯದ ಪಾಲಿನ 400 ಕೋಟಿ ರೂ. ವೆಚ್ಚದಲ್ಲಿ ಭೂ ಸ್ವಾಧೀನಕ್ಕಾಗಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಟ್ಟು 50,000 ಕೋಟಿ ರೂ ಬಂಡವಾಳ ಹೂಡಿಕೆಯಾಗಲಿದೆ. ಅಲ್ಲದೆ, 2.2 ಲಕ್ಷ ಮಂದಿಗೆ ಉದ್ಯೋಗ ದೊರೆಯಲಿದೆ. ಅಂತೆಯೇ, ರಫ್ತು ಸಾಮಥ್ರ್ಯ ವಿಸ್ತಾರವಾಗಲಿದೆ ಎಂದು ಅವರು ಹೇಳಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ 15 ಕೋಟಿ ವೆಚ್ಚದಲ್ಲಿ ವೆಂಡರ್ ಡೆವಲಪ್‍ಮೆಂಟ್ ಅಂಡ್ ಇನ್ವೆಸ್ಟರ್ ಸಮಿಟ್ ಆಯೋಜಿಸಲು ಸಂಪುಟ ಸಮ್ಮತಿಸಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಪಸಲ್ ಬಿಮಾ ಯೋಜನೆ ಹಾಗೂ ಪುರ್ನರಚಿತ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನವನ್ನು ಕ್ಲಸ್ಟರ್‍ವಾರು (ಗುಚ್ಛಗಳ) ವಿಮಾ ಸಂಸ್ಥೆಗಳನ್ನು ನಿಗದಿ ಪಡಿಸಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ರಾಜ್ಯ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗಳಿಂದ ಭೂ, ನಿವೇಶನಗಳನ್ನು 99 ವರ್ಷದ ಗುತ್ತಿಗೆ ಅವಧಿಯ ಬದಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಈ ತಿಂಗಳಿನಿಂದ (ಜುಲೈನಿಂದ) ವಾರದಲ್ಲಿ ಐದು ದಿನಗಳ ಕಾಲ ಹಾಲು ವಿತರಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ ತಗಲುವ ಹೆಚ್ಚುವರಿ 285 ಕೋಟಿ ರೂ ಹಣವನ್ನು ಕೆ ಎಂ ಎಫ್ ಗೆ ಪಾವತಿ ಮಾಡಲು ಸಂಪುಟ ಅನುಮೋದನೆ ನೀಡಿದೆ. ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುವಾಸಿತ ಹಾಲು ವಿತರಿಸಲು ಸಂಪುಟ ಅನುಮತಿಸಿದೆ.
ಅದೇ ರೀತಿ, ಶಾಲೆಗಳಲ್ಲಿ ಮುಖ್ಯ ಅಡುಗೆ ಮಾಡುವವರು ಹಾಗೂ ಅಡುಗೆ ಸಹಾಯಕರ ಗೌರವ ಧನವನ್ನು 300 ರೂ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯ ಸರ್ಕಾರ ರೈತ ಸಮುದಾಯದಿಂದ ಸ್ವಾಧೀನ ಪಡಿಸಿಕೊಳ್ಳುವ ಭೂಮಿಯ ಬೆಲೆ ನಿಗದಿ ಮತ್ತು ರೈತರಿಗೆ ಪಾಲು, ಪರಿಹಾರ ನೀಡುವ ಕುರಿತ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಅಭಿವೃದ್ದಿ ನಿಯಮಗಳಿಗೆ ಬದಲಾವಣೆ ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಕಾನೂನಿಗೆ ಅನುಗುಣವಾಗಿಯೇ ನಿಯಮಾವಳಿಗಳನ್ನು ರೂಪಿಸಲಾಗಿದೆ. ಗುಜರಾತ್ ಮತ್ತು ರಾಜಾಸ್ಥಾನದ ಮಾದರಿಯಲ್ಲೇ ಕಾಯಿದೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ರಾಜ್ಯ ಸರ್ಕಾರದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ ಯೋಜನೆಗಳಿಗೂ ಈ ನೂತನ ಕಾನೂನು ಅನ್ವಯವಾಗುತ್ತದೆ. ಶೇಕಡಾ 60 ರಷ್ಟು ಪೂರ್ಣಗೊಂಡ ಕಾಮಗಾರಿಗಳಿಗೆ ವಿನಾಯಿತಿ ದೊರೆಯಲಿದೆ ಎಂದು ಜಯಚಂದ್ರ ಅವರು ವಿವರಿಸಿದರು.
ರಾಜ್ಯದ 206 ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ 2,353 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 13.78 ಕೋಟಿ ರೂ ಅಂದಾಜಿನಲ್ಲಿ ಇ-ಆಸ್ಪತ್ರೆ ಜಾರಿಗೊಳಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯ ಪ್ರಾಥಮಿಕ ಕೇಂದ್ರದಿಂದ 10 ಕಿ. ಮೀ ಗಳಿಗಿಂತಲೂ ಹೆಚ್ಚು ದೂರವಿರುವ 150 ಆರೋಗ್ಯ ವಿಸ್ತರಣಾ ಚಿಕಿತ್ಸಾ ಕೇಂದ್ರಗಳನ್ನು 15 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ. ಸಂಜಯಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ 10 ಹಾಸಿಗೆಗಳ ಸಾಮಥ್ರ್ಯದ ವೆಂಟಿಲೇಟರ್ ಸೌಲಭ್ಯವಿರುವ ತೀವ್ರ ನಿಗಾ ಘಟಕ ಮತ್ತು 20 ಹಾಸಿಗೆಗಳ ಪಾಲಿ ಟ್ರಾಮ ಕೇಂದ್ರವನ್ನು 7.16 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ದಾವಣಗೆರೆ, ಕನಕಪುರ, ತುಮಕೂರು-ವಿಜಯಪುರ ಮತ್ತು ಕೋಲಾರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ತಲಾ 150 ರಿಂದ 200 ಹಾಸಿಗೆಗಳುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹುಬ್ಬಳ್ಳಿ ಆವರಣದಲ್ಲಿರುವ 150 ಕೋಟಿ ರೂ ಮೊತ್ತದಲ್ಲಿ ಹಾಗೂ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು 150 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ಷೇತ್ರದ ಕಾಮಗಾರಿಗಳಾದ ಕಟ್ಟಡ, ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಚಿಕ್ಕಸಂಗಮದ ಕಾಮಗಾರಿಯನ್ನು ಸುಮಾರು 139.62 ಕೊಟಿ ರೂ. ಅಂದಾಜು ವೆಚ್ಚದ ಪೈಕಿ 94.68 ಕೋಟಿ ರೂ ಮೊತ್ತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ರೇಷ್ಮೆ ನೂಲು ಬಿಚ್ಚಣಿಕೆಯಲ್ಲಿ ತೊಡಗಿರುವ ರೀಲರ್‍ಗಳಿಗೆ ಬೆಳೆ ಸಾಲದ ಮಾದರಿಯಲ್ಲಿಯೇ ಮೂರು ಲಕ್ಷ ರೂ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಬಂಡವಾಳ ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೆ 160.90 ಕೋಟಿ ರೂ ಹೊರೆ ಬೀಳಲಿದೆ.
ಕೊಂಕಣ ರೈಲ್ವೆ ನಿಗಮದಿಂದ ಮೊದಲ ಹಕ್ಕುಗಳ ವಿತರಣೆಗೆ ವಂತಿಕೆ ನೀಡುವ ಮತ್ತು ರಾಜ್ಯ ಸರ್ಕಾರದ ಶೇಕಡಾ 15 ರಷ್ಟು ಷೇರುಗಳನ್ನು ವಿತರಿಸಲು 310 ಕೋಟಿ ರೂ. ಹಾಗೂ ವಂತಿಕೆಯಾಗಿ 46.50 ಕೋಟಿ ರೂ. ಹಣವನ್ನು ಕೊಂಕಣ ರೈಲ್ವೆ ನಿಗಮಕ್ಕೆ ವರ್ಗಾಯಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬಿ ಎಸ್ ಎನ್ ಎಲ್ ಸೇವೆಗಳನ್ನು ಮುಂದಿನ ಮೂರು ವರ್ಷಗಳವರೆಗೆ 2500 ಗ್ರಾಮ ಪಂಚಾಯತ್‍ಗಳಲ್ಲಿ ಕಿಯೋನಿಕ್ಸ್ ಮೂಲಕ ವೈ ಫೈ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಬಿ ಎಸ್ ಎನ್ ಎಲ್ ಅಂದಾಜು 79.50 ಕೋಟಿ ರೂ ಪಾವತಿಸಲು ಒಪ್ಪಿಗೆ ನೀಡಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಕಟ್ಟಡ ಕಾಮಗಾರಿಯನ್ನು ನಗರದ ಇನಾಯತುಲ್ಲಾ ಮೇಖ್ರಿ ವೃತ್ತದ ಬಳಿ ಪ್ರಾರಂಭಿಸಲು ಮೊದಲ ಹಂತದಲ್ಲಿ 30 ಕೋಟಿ ರೂ ಪಾವತಿಸಲು ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯಾದ್ಯಂತ ಜೈವಿಕ ತಂತ್ರಜ್ಞಾನ ಉನ್ನತೀಕರಣ ಕಾರ್ಯಕ್ರಮದಡಿ ಮುಂದಿನ ಐದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರದ ವಂತಿಕೆ ಸೇರಿ ಒಟ್ಟು 44.17 ಕೋಟಿ ರೂ.ಗಳ ಪೈಕಿ ರಾಜ್ಯ ಸರ್ಕಾರದ ಪಾಲು 31.21 ಕೋಟಿ ರೂ. ಮೊತ್ತವನ್ನು ಪಾವತಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಸಂಗಮ್ ಗ್ರಾಮದ ಹತ್ತಿರ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪರಿಷ್ಕøತ ಮೊತ್ತ 17.40 ಕೋಟಿ ರೂ. ಗೆ ಪೂರ್ಣಗೊಳಿಸಲು ಒಪ್ಪಿಗೆ ನೀಡಿದೆ.
ಜವಹರಲಾಲ್ ನೆಹರು ವಿದ್ಯಾ ಶಾಲೆಯನ್ನು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕಸಬಾ ಹೋಬಳಿ ಬರಡನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಲು 30 ಎಕರೆ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು, ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಕಸಬಾ ಹೋಬಳಿ ಬುವನಹಳ್ಳಿ ಗ್ರಾಮದಲ್ಲಿ 10 ಎಕರೆ ಜಮೀನನ್ನು ಆಶ್ರಯ ಯೋಜನೆ ಅಡಿ ನಿವೇಶನ ರಹಿತ ರೈತರಿಗೆ ಮಂಜೂರಾತಿಗೆ ಸಂಪುಟ ಸಮ್ಮತಿಸಿದೆ.
ಕೋಲಾರ ಜಿಲ್ಲಾ ಕಚೇರಿಗಳ ಕಟ್ಟಡದ ಹೆಚ್ಚುವರಿ ಕಾಮಗಾರಿಗೆ 5.91 ಕೋಟಿ ರೂ ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕೋಲಾರ ಜಿಲ್ಲೆ ಮತ್ತು ತಾಲ್ಲೂಕು ಒಕ್ಕಲೇರಿ ಹೊಬಳಿ ಮತ್ತು ತಿರುಮಲಕೊಪ್ಪ ಗ್ರಾಮದಲ್ಲಿ ಒಟ್ಟು 50 ಎಕರೆ ಭೂಮಿಯನ್ನು ಜವಹರ ನವೋದಯ ವಿದ್ಯಾಲಯ ಸ್ಥಾಪನೆಗೆ ಉಚಿತ ಭೂಮಿ ಮಂಜೂರು ಮಾಡಲು ಸಂಪುಟ ಅನುಮತಿ ನೀಡಿದೆ. ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕು ಕಸಬಾ ಹೊಬಳಿಯ ವಂದಾರಗುಪ್ಪೆ ಗ್ರಾಮದಲ್ಲಿ ಕೇಂದ್ರಿಯ ವಿದ್ಯಾಲಯ ಸ್ಥಾಪನೆಗೆ 12.19 ಎಕರೆ ಸರ್ಕಾರಿ ಜಮೀನನ್ನು ತೋಟಗಾರಿಕೆ ಇಲಾಖೆಯಿಂದ ಉಚಿತವಾಗಿ ಕೇಂದ್ರಿಯ ವಿದ್ಯಾಲಯಕ್ಕೆ ನೀಡಲು ಸಂಪುಟ ಒಪ್ಪಿಗೆ ನೀಡಿತು.
ಮೈಸೂರು ಜಿಲ್ಲೆ ಹೆಚ್. ಡಿ. ಕೋಟೆ ತಾಲ್ಲೂಕಿನ ಹಂಚಿಪುರ ಮತು ಇತರೆ 41 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯನ್ನು 13.61 ಕೋಟಿ ರೂ ಪರಿಷ್ಕೃತ ಅಂದಾಜಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕೃಷ್ಣರಾಜ ಸಾಗರ ಬಲದಂಡೆ ಕೆಳಮಟ್ಟದ ಕಾಲುವೆಯ ಆಧುನಿಕರಣ ಕಾಮಗಾರಿಯನ್ನು 46 ಕೋಟಿ ರೂ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೆಂಗಳೂರು ಮಾಗಡಿ ಮುಖ್ಯ ರಸ್ತೆಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರಕ್ಕೆ ಸೇರಿರುವ 5 ಎಕರೆ 23 ಗುಂಟೆ ಜಮೀನನ್ನು ಸುಮನಹಳ್ಳಿ ಕುಷ್ಠ ರೋಗಿಗಳ ಪುನರ್‍ವಸತಿ ಕೇಂದ್ರಕ್ಕೆ 20 ವರ್ಷಗಳ ಗುತ್ತಿಗೆ ಆಧಾರ ಮೇಲೆ ಮಂಜೂರು ಮಾಡಿರುವುದನ್ನು ಯಥಾವತ್ತಾಗಿ ಮುಂದುವರೆಸಲು ಸಂಪುಟ ಅನುಮೋದನೆ ನೀಡಿದೆ. ಈ ಪ್ರದೇಶದಲ್ಲಿ ಐದು ಎಕರೆ ಭೂಮಿಯನ್ನು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲು ಸಂಪುಟ ನಿರ್ಧರಿಸಿದೆ ಎಂದು ಸಚಿವರು ನುಡಿದರು.
ಕರ್ನಾಟಕ ವಸತಿ ಶಿಕ್ಷಣ ಸಂಘದ ವತಿಯಿಂದ ನಡೆಸುತ್ತಿರುವ ವಸತಿ ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಸ್ತಕ ಸಾಲಿಗೆ ಅವಶ್ಯಕವಾದ ನೋಟ್ ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಎಂ ಎಸ್ ಐ ಎಲ್ ಮೂಲಕ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬಾರೀ ವಾಹನ ಚಾಲನಾ ತರಬೇತಿ ಕೇಂದ್ರವನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಸವನಪುರದಲ್ಲಿ ಪ್ರಾರಂಭಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದಕ್ಕೆ 15 ಕೋಟಿ ರೂ ವೆಚ್ಚ ಪಾವತಿಸಲು ಅನುಮತಿ ನೀಡಿದೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ 61,382 ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಯ 1,11,410 ವಿದ್ಯಾರ್ಥಿಗಳಿಗೆ ಹಾಸಿಗೆ, ದಿಂಬುಗಳನ್ನು ಒದಗಿಸಲು ಒಟ್ಟಾರೆ 71 ಕೋಟಿ ರೂ. ಬಿಡುಗಡೆ ಮಾಡಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು.
ನಗರ ಸ್ಥಳೀಯ ಸಂಸ್ಥೆಗಳ ಕಚೇರಿ ಕಾರ್ಯಚಟುವಟಿಕೆಗಳ ಸ್ವಯಂ ಚಾಲಿತಾ ನಿರ್ವಹಣೆಗಾಗಿ ಆನ್ ಲೈನ್ ತಂತ್ರಾಂಶ ಉದ್ಯಮ ಸಂಪನ್ಮೂಲ ಯೋಜನೆಯನ್ನು ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮ ಅನ್ವಯ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೆಂದ್ರಗಳಲ್ಲಿ ಬಿಸಿಯೂಟವನ್ನು ಮಾತೃಪೂರ್ಣ ಯೋಜನೆ ಅಡಿ ವಿಸ್ತರಿಸಲು ಸಚಿವ ಸಂಪುಟ ಒಪ್ಪಿಬಗೆ ನೀಡಿದೆ. ಈ ಯೋಜನೆಗೆ 202 ಕೋಟಿ ರೂ ಹಣವನ್ನು ಪಾವತಿಸಲು ಸಮ್ಮತಿ ನೀಡಿದೆ.
ದೇವರಾಜ ಅರಸು ನಾಲೆಯ ಸರಪಳಿ 0-25 ಕಿ ಮೀ ವರೆಗೆ ಹಾಗೂ 25-45 ಕಿ ಮೀ ವರೆಗೆ ಮತ್ತು 49-75 ಕಿ ಮೀ ವರೆಗೆ 24.80 ಕೋಟಿ ರೂ ಅಂದಾಶಜು ವೆಚ್ಚದಲ್ಲಿ ಮೆಕಾನಿಕಲ್ ಫೆವರ್ ಉಪಯೋಗಿಸಿ ಸಿಮೆಂಟ್ ಕಾಂಕ್ರೀಟ್ ಲೈನಿಂಗ್ ಮಾಡಲು ಹಾಗೂ ಅಡ್ಡ ಮೋರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಂಪುಟ ತೀರ್ಮಾನಿಸಿದೆ ಎಂದು ಜಯಚಂದ್ರ ಅವರು ತಿಳಿಸಿದರು.
ಡಿ ಪಿ ಎಂ : ಕೆ ಪಿ ಪಿ