ಬೆಂಗಳೂರು, ಜೂ.21: ಅನ್ನದಾತನಿಗಾಗಿ ಹಲವರು ಕನಿಕರ ತೋರಿಸುವ ಅಮೋಘ ದಿನಗಳಿಗೆ ಸಾಕ್ಷಿ ಎಂಬಂತಿವೆ ಚುನಾವಣೆ ಸನ್ನಿಹಿತವಾದ ಈ ದಿನಗಳು. ಇದಕ್ಕೆ ನಿದರ್ಶನವೆಂಬಂತೆ ರಾಜ್ಯಸರ್ಕಾರ ಕೃಷಿಕರ ಐವತ್ತು ಸಾವಿರ ರೂಪಾಯಿ ಸಾಲಮನ್ನಾ ಘೋಷಿಸಿದ್ದು, ಸಹಕಾರಿ ಬ್ಯಾಂಕುಗಳಲ್ಲಿನ ಎಲ್ಲಾ ರೈತರ ಐವತ್ತು ಸಾವಿರದವರೆಗಿನ ಸಾಲಗಳು ಮನ್ನಾ ಆಗಲಿದೆ.
ಹೌದು, ಸಹಕಾರಿ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಗರಿಷ್ಟ ಐವತ್ತು ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ಬುಧವಾರ ತಿಳಿಸಿದರು. ಸಹಕಾರಿ ಸಂಸ್ಥೆಗಳಲ್ಲಿ ಜೂ.20 ರವರೆಗೆ ರೈತರು ತೆಗೆದುಕೊಂಡಿರುವ ಸಾಲಗಳು ಮನ್ನಾ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ಪ್ರಕಟಿಸಿರುವ ಈ ನಿರ್ಧಾರದಿಂದ 22,27,506 ರೈತರಿಗೆ ಲಾಭವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ 8,165 ಕೋಟಿ ಹೊರೆ ಬೀಳಲಿದೆ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಈ ದೃಢನಿರ್ಧಾರದ ಮೂಲಕ ತಮ್ಮ ರಾಜತಂತ್ರದ ಬಗ್ಗೆ ಮತ್ತೊಮ್ಮೆ ವಿರೋಧ ಪಕ್ಷಗಳಿಗೆ ಸೂಚನೆ ನೀಡಿರುವ ಸಿದ್ಧರಾಮಯ್ಯ, ಸಾಲಮನ್ನಾಕ್ಕಾಗಿ ಕೂಗಾಡುತ್ತಿದ್ದ ಹಲವು ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.