ಬೆಂಗಳೂರು, 17 ಫೆಬ್ರವರಿ 2020:
ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಇಂದು ರಾಜ್ಯ ವಿಧಾನಮಂಡಲದಲ್ಲಿ ಮಾಡಿದ ಭಾಷಣದಲ್ಲಿ ಜಲಸಂಪನ್ಮೂಲ ಇಲಾಖೆಯ ಕುರಿತು ಉತ್ಸುಕತೆಯಿಂದ ಮಾತನಾಡಿರುವುದು ಹೆಮ್ಮೆಯ ಸಂಗತಿ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ತಮ್ಮ ಸರ್ಕಾರವು ಆದ್ಯತೆಯ ಮೇರೆಗೆ ಬೃಹತ್ ನೀರಾವರಿ ಯೋಜನೆಗಳನ್ನು ಕೈಗೊಂಡಿದ್ದು, ರಾಜ್ಯದ 12,000 ಹೆಕ್ಟೇರ್ ಪ್ರದೇಶಕ್ಕೆ ಈ ಪ್ರಸಕ್ತ ವರ್ಷದಲ್ಲಿ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮಲಪ್ರಭಾ ಯೋಜನೆಯ ಕಾಲುವೆಗಳ ಆಧುನೀಕರಣಕ್ಕೆ 1000ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ವಿಜಯ ನಗರ ಕಾಲುವೆಗಳ ಆಧುನೀಕರಣಕ್ಕೆ 450 ಕೋಟಿ ರೂ.ಗಳನ್ನು ಸರ್ಕಾರ ಒದಗಿಸುತ್ತಿದೆ. ಹಾಗೆಯೇ ಹೇಮಾವತಿ ನಾಲೆಯ ಆಧುನೀಕರಣಕ್ಕೆ 475 ಕೋಟಿ ರೂ.ಗಳನ್ನು ಸರ್ಕಾರ ಒದಗಿಸಲಿದೆ. ಕರ್ನಾಟಕ ರಾಜ್ಯದ ಒಟ್ಟು 21 ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳಿಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 4050 ಕೋಟಿ ರೂ.ಗಳನ್ನು ಮೀಸಲಾಗಿಡುತ್ತಿದ್ದು ಈ ಕಾರಣಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ. ನಾನು ರಾಜ್ಯದ ಜಲ ಸಂಪನ್ಮೂಲ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗಲೇ ಹೇಳಿದಂತೆ ಜನತೆಗೆ ಮತ್ತು ರಾಜ್ಯದ ಭೂಮಿಗೆ ನೀರುಣಿಸುವುದು ಮತ್ತು ರಾಜ್ಯದ ಜನರ ಕಣ್ಣೀರು ಒರೆಸುವುದೇ ನನ್ನ ಆದ್ಯತೆಯ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.