ಬೆಂಗಳೂರು, ಮೇ 23 ( ಕರ್ನಾಟಕ ವಾರ್ತೆ ):
ರೈತರ ಬೆಳೆ ಸಾಲ ಮನ್ನಾ ಕುರಿತು ತಾವು ಯೂ ಟರ್ನ್ ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳಿಗೆ ವಿರಾಮ ಘೋಷಿಸಿ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡುವುದಾಗಿ ಇಲ್ಲಿ ಇಂದು ಪ್ರಕಟಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದೊಡನೆಯೇ, ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕುಮಾರ ಸ್ವಾಮಿ ಅವರು ಸಂಪೂರ್ಣ ಬಹುಮತದೊಂದಿಗೆ ಜಾತ್ಯಾತೀತ ಜನತಾದಳ ಸರ್ಕಾರದ ರಚನೆಯಾಗಿದ್ದರೆ 24 ಗಂಟೆಗಳೊಳಗೆ ಸಾಲಮನ್ನಾ ಮಾಡುವ ಕುರಿತು ತೀರ್ಮಾನ ಕೈಗೊಳ್ಳುತ್ತಿದ್ದೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಸಹಮತಿ ಸಾಧಿಸಿ ನಿಲುವುಗಳನ್ನು ಕೈಗೊಳ್ಳಬೇಕಾಗುತ್ತದೆ. ನಿರ್ಧಾರಗಳನ್ನು ಪ್ರಕಟಿಸಬೇಕಾಗುತ್ತದೆ. ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಆರ್ಥಿಯ ತಜ್ಞರ ಅಭಿಪ್ರಾಯವೇ ಬೇರೆಯಾಗಿರುತ್ತದೆ. ಅಂತೆಯೇ, ರಾಜಕೀಯ ತಜ್ಞರ ಅಭಿಪ್ರಾಯವೇ ಬೇರೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ನಿರ್ಣಯದ ಶ್ರೇಯಸ್ಸು ತಮಗೆ ಬೇಷರತ್ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷಕ್ಕೂ ಸಲ್ಲಬೇಕು. ವಿಶ್ವಾಸ ಮತ ಪಡೆದ ನಂತರವೇ ತಮ್ಮ ಜವಾಬ್ದಾರಿ ಪ್ರಾರಂಭವಾಗುತ್ತದೆ. ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಒಟ್ಟಾರೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಹಾಗೂ ಕಾರ್ಯಚಟುವಟಿಕೆಗಳು ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಪರಿಧಿ ಮತ್ತು ವ್ಯಾಪ್ತಿಗೊಳಪಡಬೇಕು ಎಂಬುದು ತಮ್ಮ ಸದಾಶಯವಾಗಿದೆ ಎಂದರು.
ನಾವು ಕಾರಣರಲ್ಲ !
ಚುನಾವಣಾ ಫಲಿತಾಂಶ ಹೊರಬಿದ್ದಂತೆಯೇ ರಾಜ್ಯದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯ ವಾತಾವರಣಕ್ಕೆ ತಾವು ಕಾರಣರಲ್ಲ ಎಂದು ಬಣ್ಣಿಸಿದ ಕುಮಾರಸ್ವಾಮಿ ಅವರು ಒಂದೆಡೆ ನಾಡಿನ ಜನತೆಯ ತೀರ್ಮಾನವೇ ಹಾಗಿತ್ತು. ಮತ್ತೊಂದೆಡೆ ಮಾಧ್ಯಮಗಳಲ್ಲಿ ಕಾಲಕಾಲಕ್ಕೆ ಹೊರಹೊಮ್ಮುತ್ತಿದ್ದ ಸಮೀಕ್ಷೆಗಳೂ ಅತಂತ್ರ ಜನಾದೇಶಕ್ಕೆ ಎಡೆಮಾಡಿಕೊಟ್ಟಿತು ಎಂದು ಸೂಚ್ಯವಾಗಿ ಹೇಳಿದರು.
ಅಪವಿತ್ರ ಮೈತ್ರಿ ಏನಲ್ಲ
ಜಾತ್ಯಾತೀತ ಜನತಾ ದಳ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಚುನಾವಣಾ ನಂತರದ ಮೈತ್ರಿ ಅಪವಿತ್ರವೂ ಅಲ್ಲ, ಅನೈತಿಕವೂ ಅಲ್ಲ. ತಮ್ಮ ಪಕ್ಷಕ್ಕೆ ಬಹುಮತ ದೊರೆಯದೇ ಇದ್ದಲ್ಲಿ ತಾವು ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವುದಾಗಿ ಹೇಳಿದ್ದು ನಿಜ. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತಮ್ಮ ಪಕ್ಷಕ್ಕೆ ವಿಸ್ತರಿಸಿದ ಬೇಷರತ್ ಬೆಂಬಲದಿಂದ ರಾಜ್ಯದ ಹಿತಕಾಯಲು ತಮ್ಮ ಹಮ್ಮು ಬಿಮ್ಮುಗಳನ್ನು ತೊರೆದು ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಚುನಾವಣೆಗಳಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವು ಸದನದಲ್ಲಿ ವಿಶ್ವಾಸ ಮತ ಯಾಚಿಸಲೂ ಹಿಂದಕ್ಕೆ ಸರಿದಂತಹ ಪರಿಸ್ಥಿತಿಯಲ್ಲಿ ತಾವು ಸಾಂದರ್ಭಿಕ ಶಿಶುವಾಗಿ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊರಬೇಕಾಯಿತು ಎಂದು ಮುಖ್ಯಮಂತ್ರಿ ವಿವರಿಸಿದರು.
ಪ್ರತಿಭಟಿಸುವ ಕಷ್ಟ ನೀಡುವುದಿಲ್ಲ
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಸದನದಲ್ಲಿ ರೈತಪರ ಧ್ವನಿ ಎತ್ತಿದ್ದಾರೆ. ರೈತರಿಗೆ ನ್ಯಾಯ ದೊರಕಿಸಿಕೊಡಲು ಬೀದಿಗಿಳಿದು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರ ರೈತಪರ ಕಳಕಳಿ ಮತ್ತು ಕಾಳಜಿಗೆ ನಾವು ಸ್ಪಂದಿಸುತ್ತೇವೆ. ಅವರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವರಿಗೆ ಪ್ರತಿಭಟನೆ ನಡೆಸುವ ಕಷ್ಟವನ್ನು ಕೊಡುವುದಿಲ್ಲ. ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಯಾವುದೇ ಪ್ರತಿಭಟನಾಕಾರರಿಗೆ ಅಥವಾ ಹೋರಾಟಗಾರರಿಗೆ ತಮ್ಮೊಡನೆ ಬಂದು ಮುಕ್ತವಾಗಿ ಚರ್ಚಿಸಲು ಅವಕಾಶ ನೀಡುತ್ತೇವೆ ಜನರ ಕಷ್ಟ-ಸಂಕಷ್ಟಗಳನ್ನು ಬಗೆಹರಿಸುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು. ಜನತೆಯ ಕಷ್ಟ ಮತ್ತು ನೋವಿನ ಬಗ್ಗೆ ಮಾಹಿತಿ ಕೊಡಿ. ಅದನ್ನು ಪರಿಹರಿಸುವೆ ಎಂದು ಮುಖ್ಯಮಂತ್ರಿ ಮಾಧ್ಯಮದವರಲ್ಲೂ ಮನವಿ ಮಾಡಿದರು.
ಸ್ವಾಮೀಜಿಯೊಬ್ಬರು ತಮ್ಮ ಮೇಲೆ ಮಾಡಿದ ವಾಕ್ಪ್ರಹಾರಕ್ಕೆ ಮನನೊಂದ ಕುಮಾರಸ್ವಾಮಿ ಅವರು ಸ್ವಾಮೀಜಿಗಳು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಬಾರದು. ಧರ್ಮ ಪ್ರಚಾರ ಸ್ವಾಮೀಜಿಗಳ ಕೆಲಸ. ಗುರುಸ್ಥಾನದಲ್ಲಿದ್ದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು. ಇಲ್ಲವಾದಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲಿ ಎಂದು ನೇರವಾಗಿ ಸವಾಲು ಹಾಕಿದರು. ಸಮಾಜದ ಒಳಿತಿಗಾಗಿ ತಾವು ಭಗವಂತನ ಹೆಸರಿನಲ್ಲಿ ಮುಖ್ಯಮಂತ್ರಿ ಸ್ಥಾನದ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಸ್ಪಷ್ಟವಾಗಿ ಹೇಳಿದರು.
ಅಸಮಾಧಾನಕ್ಕೆ ಅವಕಾಶವಿಲ್ಲ, ಟೀಕಿಸುವವರೇ ನನ್ನ ಸ್ನೇಹಿತರು !
ತಮ್ಮ ಈ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಕ್ಕೆ ಭಿನ್ನಾಭಿಪ್ರಾಯಕ್ಕೆ ಅವಕಾಶವನ್ನು ಕೊಡುವುದಿಲ್ಲ. ಸಮನ್ವಯ ಸಮಿತಿ ರಚಿಸಿ ಸಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತೇವೆ. ರಾಜಕೀಯಕ್ಕಿಂತಲೂ ಅಭಿವೃದ್ಧಿಗೇ ಆಧ್ಯತೆ. ಇದರಲ್ಲಿ ಯಾವ ಅನುಮಾನವೂ ಬೇಡ. ಸಮ್ಮಿಶ್ರ ಸರ್ಕಾರವನ್ನು ಐದು ವರ್ಷಗಳ ಕಾಲ ಅತ್ಯುತ್ತಮವಾಗಿ ನಡೆಸಬಹುದು ಎಂಬುದನ್ನು ಸಾಬೀತುಪಡಿಸುವುದೂ ನಮ್ಮ ಉದ್ದೇಶ. ನಮ್ಮ ಸರ್ಕಾರ ಯಾವುದೇ ಒಂದು ವರ್ಗದವರನ್ನು ಓಲೈಸುವ ಸರ್ಕಾರವಲ್ಲ. ಯಾವುದೇ ಒಂದು ವರ್ಗಕ್ಕೆ ಸೇರಿದ ಸರ್ಕಾರವೂ ಅಲ್ಲ. ಜಾತಿ ರಾಜಕಾರಣಕ್ಕೆ ತಮ್ಮ ಕಡು ವಿರೋಧವಿದೆ. ಬಡವರು ಹಾಗೂ ಶ್ರೀಮಂತರು ಎಂಬ ಎರಡೇ ಜಾತಿ ನಮ್ಮ ಸಮಾಜದಲ್ಲಿದೆ ಎಂಬುದು ನನ್ನ ನಂಬಿಕೆ. ಹೊಗಳುವವರಲ್ಲ, ಟೀಕಿಸುವವರೇ ನನ್ನ ಸ್ನೇಹಿತರು ಎಂದು ಕುಮಾರಸ್ವಾಮಿ ಅವರು ವ್ಯಾಖ್ಯಾನಿಸಿದರು.
ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದ್ದೇವೆ
ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹೆಬ್ಬಾಗಿಲು ತೆರಯುವಲ್ಲಿ ತಮ್ಮ ಕೊಡಗೆಯೂ ಇದೆ ಎಂಬುದನ್ನು ಆ ಪಕ್ಷದ ನಾಯಕರಿಗೆ ನೆನಪಿಸಿದ ಕುಮಾರಸ್ವಾಮಿ ಅವರು ಪ್ರಜಾಪ್ರಭುತ್ವದಲ್ಲಿ ಇತರೆ ಪಕ್ಷಗಳಿಗೆ ಅಸ್ತಿತ್ವವನ್ನೇ ಇಲ್ಲದಂತೆ ಮಾಡಹೊರಟ ಭಾರತೀಯ ಜನತಾ ಪಕ್ಷದ ಅಶ್ವಮೇಧದ ಕುದುರೆಯನ್ನು ಕರ್ನಾಟಕದಲ್ಲಿ ಕಟ್ಟಿ ಹಾಕಿದ್ದೇವೆ. ಇನ್ನಾದರೂ ಆವೇಶ-ಭರಿತ ಹೇಳಿಕೆಗಳನ್ನು ನಿಲ್ಲಿಸಿ ಎಂದು ಆ ಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಲಹೆ ಮಾಡಿದರು.
ಸುಭದ್ರ ಸರ್ಕಾರ
ಈ ಸರ್ಕಾರ ಇರುತ್ತಾ ? ಹೋಗುತ್ತಾ ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಆದರೆ, ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ. ಜಾತ್ಯಾತೀತ ಜನತಾದಳ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಐದು ವರ್ಷಗಳ ಕಾಲ ಸುಭದ್ರವಾಗಿರುತ್ತದೆ ಎಂದು ಹೇಳಿದ ಕುಮಾರಸ್ವಾಮಿ ಅವರು ಎರಡೂ ಪಕ್ಷಗಳು ತಲಾ 30 ತಿಂಗಳ ಅವಧಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿನ ಕಾಂಗ್ರೆಸ್ ಮುಖಂಡ ಎಂ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಗಣ್ಯರಿಗೆ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯಾತಿಗಣ್ಯರ ಹಾಜರಾತಿ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಒಂದು ದಾಖಲೆ ಎಂದು ಮುಖ್ಯಮಂತ್ರಿ ಬಣ್ಣಿಸಿದರು. ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರೂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.