ಅಕ್ಟೋಬರ್ 17, 2019, ಬೆಂಗಳೂರು: ನೆದರ್‍ಲ್ಯಾಂಡಿನ ಕೃಷಿ, ಪ್ರಕೃತಿ ಮತ್ತು ಆಹಾರ ಗುಣಮಟ್ಟ ಸಚಿವರಾದ ಮಿ: ಮಾರೋಲೈನ್ ಸೊನೇಮಾರವರ ನೇತೃತ್ವದ ಅಧಿಕೃತ ನಿಯೋಗ ಇಂದು ವಿಕಾಸಸೌಧದಲ್ಲಿ ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವರನ್ನು ಭೇಟಿ ಮಾಡಿತು.
ನೆದರ್‍ಲ್ಯಾಂಡಿನ ನಿಯೋಗವನ್ನು ಸ್ವಾಗತಿಸಿದ ಸಚಿವ ವಿ.ಸೋಮಣ್ಣ, ಕರ್ನಾಟಕವು ತೋಟಗಾರಿಕೆ ಅಭಿವೃದ್ಧಿಯಲ್ಲಿ ಇಡೀ ರಾಷ್ಟ್ರದಲ್ಲಿಯೇ ಮುಂಚೂಣಿ ರಾಜ್ಯಗಳ ಪೈಕಿ ಒಂದಾಗಿರುವುದನ್ನು, ತೋಟಗಾರಿಕೆ ವಿಸ್ತೀರ್ಣದಲ್ಲಿ ರಾಜ್ಯವು 2ನೇ ಸ್ಥಾನದಲ್ಲಿರುವುದನ್ನು ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ರಾಜ್ಯವು ಸಾಧಿಸಿರುವ ಪ್ರಗತಿಗಳನ್ನು ನಿಯೋಗಕ್ಕೆ ವಿವರಿಸಿದರು.
ಮಹಾರಾಷ್ಟ್ರದ ಬಾರಾಮತಿಯಲ್ಲಿ ನೆದರ್‍ಲ್ಯಾಂಡ್ ಸರ್ಕಾರದ ಸಹಯೋಗದೊಂದಿಗೆ ಕಳೆದ ವರ್ಷ ಸ್ಥಾಪಿಸಿರುವ Centre of Excellence ಉತ್ತಮವಾಗಿ ರೈತಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ತಿಳಿಸಿದ ನೆದರ್‍ಲ್ಯಾಂಡಿನ ಕೃಷಿ ಸಚಿವರು, ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನೆದರ್‍ಲ್ಯಾಂಡ್ ಸಹಯೋಗದೊಂದಿಗೆ ಇಂತಹ ಸಂಸ್ಥೆಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದರು.
ಇದೇ ಸಂದರ್ಭದಲ್ಲಿ ನೆದರ್‍ಲ್ಯಾಂಡ್ ದೇಶವು ಕೃಷಿ ಹಾಗೂ ಪಶುಸಂಗೋಪನೆ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಸಾಧಿಸಿರುವ ಪ್ರಗತಿಯನ್ನು ಪರಿಗಣಿಸಿ ತೋಟಗಾರಿಕೆ, ಹೈನುಗಾರಿಕೆ ಹಾಗೂ ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಪರಸ್ಪರ ತಂತ್ರಜ್ಞಾನ ವಿನಿಮಯ, ಉತ್ಕೃಷ್ಟತಾ ಕೇಂದ್ರಗಳ ನವೀನ ವಿನ್ಯಾಸ, ಪಾಲುದಾರರ ನಡುವಿನ ಬಡಂಬಡಿಕೆ, ಇತ್ಯಾದಿ, ಪೂರಕ ಅಂಶಗಳ ಬಗ್ಗೆ ಚರ್ಚಿಸಿರುವುದೇ ಅಲ್ಲದೆ ಕರ್ನಾಟಕದಿಂದ ನೆದರ್‍ಲ್ಯಾಂಡ್ ದೇಶಕ್ಕೆ ಅಧಿಕೃತ ನಿಯೋಗ ಕಳುಹಿಸುವ ಮತ್ತು ಕರ್ನಾಟಕದಲ್ಲಿ Centre of Excellence ಸ್ಥಾಪಿಸಲು ಮಾದರಿಯಾಗಿ ಒಂದು ಜಿಲ್ಲೆಯನ್ನು ಪರಿಗಣಿಸಿ ಅಭಿವೃದ್ಧಿಪಡಿಸುವ ಬಗ್ಗೆಯೂ ಸಹ ಚರ್ಚಿಸಲಾಯಿತು.