ಜೂ.15, 2017, ಶ್ರೀರಂಗಪಟ್ಟಣ: ಮುಖ್ಯಮಂತ್ರಿಯಾಗಬೇಕೆಂಬ ಹಂಬಲ ನನಗಿಲ್ಲ. ಬದಲಾಗಿ ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕೆಂಬ ಆಸೆಯಿದೆ. ಅದಕ್ಕಾಗಿ ಯೋಗ್ಯ ಅಭ್ಯರ್ಥಿಯನ್ನೇ ಮಂಡ್ಯದಲ್ಲಿ ನಿಲ್ಲಿಸಿ ರಾಜ್ಯದ ಜನತೆಯ ಉದ್ಧಾರಕ್ಕೆ ಪ್ರಯತ್ನಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದರು.
ಶ್ರೀರಂಗಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಯಡಿಯೂರಪ್ಪನವರು, ಬರಗಾಲ ಸಂದರ್ಭದಲ್ಲಿ ರೈತರ ಸಾಲಮನ್ನಾ ಮಾಡಲು ಹಿಂಜರಿಯುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಸದ್ಯದಲ್ಲೇ ಮಾಡಲಿದ್ದೇವೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆಯೂ ಹದಗೆಟ್ಟಿದೆ. ನೀರಾವರಿ ಯೋಜನೆಗೆ ಸರಿಯಾದ ಹಣ ಒದಗಿಸಿ ಕೊಡುವಲ್ಲಿ ಸರ್ಕಾರ ಹಿಂಜರಿಯುತ್ತಿದೆ. ಹಾಗಾಗಿ ಬಿ.ಜೆ.ಪಿ ಪಕ್ಷ ರೈತರ ಪರವಾಗಿ ಹೋರಾಡುವಾಗ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಸಿದ್ಧರಾಮಯ್ಯನವರೇ ನೇರ ಹೊಣೆಯಾಗಬೇಕಾಗುತ್ತದೆ. ಆದಷ್ಟು ಬೇಗ ಇದರ ಬಗ್ಗೆ ಎಚ್ಷರಿಕೆ ವಹಿಸದಿದ್ದರೆ ಫಲ ಎದುರಿಸಬೇಕಾದೀತು ಎಂದರು.
ಕೇಂದ್ರ ಸರ್ಕಾರವನ್ನು ಮಾದರಿಯಾಗಿಸಿಕೊಳ್ಳಿ
ಲಂಚ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದೆ. ಕೇಂದ್ ರಸರ್ಕಾರ ಒಂದೇ ಒಂದು ಹಗರಣದಲ್ಲಿ ಸಿಲುಕದೇ ಆಡಳಿತ ನಡೆಸುತ್ತಿರುವಾಗ ರಾಜ್ಯ ಸರ್ಕಾರಕ್ಕೆ ಈ ಬದ್ಧತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಘಲಕ್ ದರ್ಬಾರ್ ರೀತಿಯ ಆಡಳಿತವನ್ನು ಸಿದ್ಧರಾಮಯ್ಯನವರು ಇಂದು ನೆಡೆಸುತ್ತಿದ್ದಾರೆ. ಅನ್ನಭಾಗ್ಯದಂತಹ ಯೋಜನೆಗಳಲ್ಲಿ ಮೋದಿಯವರ ಪಾತ್ರವೇ ಹೆಚ್ಚಿದೆ. ಮುದ್ರಾ ಬ್ಯಾಂಕ್, ಹೊಸ ಬೆಳಕು ಯೋಜನೆ ಕೂಡಾ ಕೇಂದ್ರ ಸರ್ಕಾರದ್ದೇ ಆಗಿದ್ದು ರಾಜ್ಯ ಸರ್ಕಾರ ತನ್ನ ಪ್ರಚಾರಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ನಮ್ಮ ರಾಜ್ಯಕ್ಕೆ ಮಾದರಿಯಾಗಬೇಕಿದೆ ಎಂದರು.
ಸಿದ್ಧರಾಮಯ್ಯನವರಿಗೆ ಜನರ ಸಂಕಷ್ಟಗಳ ಅರಿವಿಲ್ಲ
ನಾನು ಅಧಿಕಾರದಲ್ಲಿದ್ದಾಗ ಮಕ್ಕಳಿಗೆ ಸೈಕಲ್, ಮಡಿಲು ಯೋಜನೆ ಹಾಗೂ ಮಂಡ್ಯದ ಸಮಗ್ರ ಅಭಿವೃದ್ಧಿಗೆ ಮಾಡಿದ ಕಾರ್ಯಗಳ ಕುರಿತು ಪಟ್ಟಿಯನ್ನೇ ಮಾಡಬಹುದಾಗಿದೆ. ಆದರೆ ಜನರ ಸಂಕಷ್ಟಗಳ ಅರಿವಿಲ್ಲದೇ ಸಿದ್ಧರಾಮಯ್ಯನವರು ಮಂಡ್ಯಕ್ಕಾಗಿ ಹೆಚ್ಚಿನ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡಲು ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರ ಕೇವಲ ಕೃಷಿಗಾಗಿ ರಾಜ್ಯಕ್ಕೆ 771 ಕೋಟಿ ನೀಡಿದೆ. ಆದರೆ ಇದನ್ನು ಜನರಿಗೆ ತಲುಪಿಸುವಲ್ಲಿ ಸರಿಯಾದ ವ್ಯವಸ್ಥೆ ಇಂದಿನ ಆಡಳಿತ ಪಕ್ಷದಲ್ಲಿ ಹಾಗೂ ಅದರ ಬಗ್ಗೆ ನಿರ್ದಿಷ್ಟ ಚಿಂತನೆಗಳು ಪಕ್ಷದ ವರಿಷ್ಟರಲ್ಲಿಲ್ಲ. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಸರಿಯಾದ ಸ್ಪಂದನೆ ದೊರೆಯಬೇಕಾದರೆ ಬಿ.ಜೆ.ಪಿ. ಸರ್ಕಾರ ಆಡಳಿತಕ್ಕೆ ಬರುವುದೊಂದೇ ಮಾರ್ಗೋಪಾಯ. ಅದಕ್ಕೆ ಜನತೆ ಅನುವು ಮಾಡಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಬಿ. ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬಿಜೆಪಿ ನಾಯಕರಾದ ತೇಜಸ್ವಿನಿ ಗೌಡ, ಕೆ.ಶಿವರಾಮ್, ನಾಗೇಂದ್ರ, ಟಿ.ಶ್ರೀಧರ್, ಅಬ್ದುಲ್ ಅಜೀಂ, ಕೆ. ಬಲರಾಮ್ ಮತ್ತಿತರರು ಉಪಸ್ಥಿತರಿದ್ದರು.