Sunday, 8th September 2024
 
Advertise With Us | Contact Us

ಕಾಂಗ್ರೆಸ್ಸನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿ ಯಾರೂ ರಾಜಕೀಯ ದುರ್ಲಾಭ ಪಡೆಯಬಾರದು ಎಂಬುದು ಗಾಂಧೀಜಿ ಅವರ ಆಶಯವಾಗಿತ್ತು: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು, ಅಕ್ಟೋಬರ್ 2 (ಕರ್ನಾಟಕ ವಾರ್ತೆ):
ಭಾರತಕ್ಕೆ ಸ್ವಾತಂತ್ರ್ಯ ಗಳಿಸಿ ಕೊಡುವಲ್ಲಿ ದೇಶದ ಜನರನ್ನು ಸಂಘಟಿಸಲು ಪ್ರಮುಖ ಸಂಘಟನೆಯಾಗಿದ್ದ ಕಾಂಗ್ರೆಸ್ಸನ್ನು ದೇಶಕ್ಕೆ ಸ್ವಾತಂತ್ರ್ಯ ದೊರೆತೊಡನೆಯೇ ವಿಸರ್ಜಿಸುವಂತೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಕರೆ ಕೊಟ್ಟಿದ್ದರು ಎಂಬುದನ್ನು ಸ್ಮರಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ಸನ್ನು ರಾಜಕೀಯ ಪಕ್ಷವಾಗಿ ಪರಿವರ್ತಿಸಿ ಯಾರೂ ರಾಜಕೀಯ ದುರ್ಲಾಭ ಪಡೆಯಬಾರದು ಎಂಬುದು ದೇಶದ ಭವಿಷ್ಯದ ಹಿನ್ನೆಲೆಯಲ್ಲಿ ಗಾಂಧೀಜಿ ಅವರ ಸದಾಶಯ, ದೂರದೃಷ್ಠಿ ಹಾಗೂ ದೂರದರ್ಶಕತ್ವದ ಚಿಂತನೆಯಾಗಿತ್ತು ಎಂದು ಇಲ್ಲಿ ಇಂದು ಹೇಳಿದರು.

ಮಹಾತ್ಮ ಗಾಂಧಿ ಅವರ 150 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಕವಿ ಪ್ರೊ ಜಿ ಎಸ್ ಶಿವರುದ್ರಪ್ಪ ಅವರ ಸುಪುತ್ರ ಹಾಗೂ ಚಾಮರಾಜನಗರದಲ್ಲಿ ದೀನಬಂಧು ಸೇವಾ ಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಾಂಧೀಜಿ ಅವರ ಸರಳತೆಯಿಂದ ಸೇವೆಯವರೆಗಿನ ತತ್ವ-ಸಿದ್ಧಾಂತಗಳನ್ನು ಪಸರಿಸುತ್ತಾ ಹಾಗೂ ಅವುಗಳನ್ನು ಮೈಗೂಡಿಸಿಕೊಂಡಿರುವ ಪ್ರೊ ಜಿ ಎಸ್ ಜಯದೇವ್ ಅವರಿಗೆ 2019 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಮಹಾತ್ಮ ಗಾಂಧಿ ಅವರು ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟ ದಿನ 1947 ರ ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯಲ್ಲಿರಲಿಲ್ಲ. ಬದಲಾಗಿ ಪಶ್ಚಿಮ ಬಂಗಾಲದ ನೌಕಾಲಿಯಲ್ಲಿದ್ದರು. ನುಡಿದಂತೆ ನಡೆದ ಹಾಗೂ ನಡೆದಂತೆ ನುಡಿದ ಮಹಾತ್ಮ ಈ ದೇಶದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಈ ಹಿಂದೆ ಹುಟ್ಟಿರಲಿಲ್ಲ, ಮುಂದೆಯೂ ಹುಟ್ಟುವುದಿಲ್ಲ ಎಂದು ಮುಖ್ಯಮಂತ್ರಿ ಬಾಪೂ ಅವರನ್ನು ಗುಣಗಾನ ಮಾಡಿದರು.

ಅಲ್ಲದೆ, ರಕ್ತ ಮಾಂಸಗಳಿಂದ ತುಂಬಿದ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿದ್ದಾನೆ ಎಂಬುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ ಎಂದು ಗಾಂಧೀಜಿ ಅವರನ್ನು ಕುರಿತು ಸುಪ್ರಸಿದ್ಧ ವಿಜ್ಞಾನಿ ಐನ್‍ಸ್ಟೈನ್ ಅವರ ಮಾತುಗಳನ್ನು ಮೆಲುಕು ಹಾಕಿದ ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹಾತ್ಮ ಗಾಂಧಿ ಅವರ ಚಿಂತನೆಗಳ ಕುರಿತು ಚರ್ಚೆಗೆ ವೇದಿಕೆ ಕಲ್ಪಿಸಿಕೊಡುವುದಾಗಿ ಪ್ರಕಟಿಸಿದರು.

ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರ ನೇತೃತ್ವದ ಆಯ್ಕೆ ಸಮಿತಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

ಚಾಮರಾಜನಗರದಲ್ಲಿ ದೀನಬಂಧು ಸೇವಾ ಸಂಸ್ಥೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗೆ ಏಳು ಎಕರೆ ಭೂಮಿಗಾಗಿ ಕಳೆದ ಏಳು ವರ್ಷಗಳಿಂದ ಓಡಾಟ ನಡೆಸುತ್ತಿರುವುದಾಗಿ ಪ್ರಶಸ್ತಿ ಪುರಸ್ಕೃತ ಪ್ರೊ ಜಯದೇವ್ ಅವರು ಹೇಳಿದ ಮಾತಿಗೆ ಸ್ಥಳದಲ್ಲೇ ಸ್ಪಂದಿಸಿದ ಯಡಿಯೂರಪ್ಪ ಅವರು ಇದು ಸರ್ಕಾರಗಳು ಹಾಗೂ ಅಧಿಕಾರಿಗಳ ನಿಷ್ಕ್ರಿಯ ಧೋರಣೆಗೆ ಸಾಕ್ಷಿ. ಎರಡು ಮೂರು ದಿನಗಳಲ್ಲಿ ಸಂಬಂಧಿತ ಕಡತವನ್ನು ತರಿಸಿ ಮುಖ್ಯಮಂತ್ರಿಯಾಗಿ ತನ್ನ ಕರ್ತವ್ಯ ಎಂದು ಭಾವಿಸಿ ದೀನಬಂಧು ಸೇವಾ ಸಂಸ್ಥೆಗೆ ಏಳು ಎಕರೆ ಜಮೀನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಅವರು ಮಾತನಾಡಿ ಯುದ್ಧವನ್ನು ಗೆದ್ದವರಿಗಿಂತಲೂ, ಪ್ರೇಮವನ್ನು ಗೆದ್ದವರಿಗಿಂತಲೂ, ತನ್ನನ್ನು ತಾನೇ ಗೆದ್ದ ಮಹಾತ್ಮ ಗಾಂಧಿ ಅವರು ಸಾಮಾನ್ಯ ಸಂಗತಿಗಳನ್ನು ಬ್ರಹ್ಮಾಸ್ತ್ರವನ್ನಾಗಿ ಪರಿವರ್ತಿಸಿ ಅವುಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮೇರು ವ್ಯಕ್ತಿ. ಎಲ್ಲರ ಬದುಕಿಗೂ ಅತ್ಯಾವಶ್ಯಕವಾದ ಉಪ್ಪು ಸ್ವಾತಂತ್ರ್ಯ ಚಳುವಳಿಯ ರಣಕಹಳೆ ಮೊಳಗಿಸಲು ಗಾಂಧೀಜಿ ಅವರಿಗೆ ಒಂದು ಪ್ರಭಾವೀ ಅಸ್ತ್ರವಾಯಿತು. ಉಪವಾಸ ಎಂಬ ಧಾರ್ಮಿಕ ಆಚರಣೆಯನ್ನೂ ಅವರೂ ಆಂದೋಲನವನ್ನಾಗಿ ಪರಿವರ್ತಿಸಿದರು. ಗಾಂಧೀವಾದಿಗಳಿಗಿಂತಲೂ ಇದೀಗ ದೇಶಕ್ಕೆ ಗಾಂಧಿ ಹಾದಿಯಲ್ಲಿ ನಡೆಯುವವರ ಅಗತ್ಯವಿದೆ ಎಂದರು. ತುಕ್ಕು ಹಿಡಿಯುವುದಕ್ಕಿಂತಲೂ ಸವೆದು ಹೋಗುವುದೇ ಲೇಸು ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದ ಸಚಿವರು ರಾಜ್ಯದಲ್ಲಿ ಮಹಾತ್ಮ ಗಾಂಧಿ ಅವರು ಭೇಟಿ ನೀಡಿದ ಸ್ಥಳಗಳನ್ನು ಸಂಕಲ್ಪ ಸ್ಥಳಗಳನ್ನಾಗಿ ಗುರುತಿಸಿ ಅವುಗಳನ್ನು ಪ್ರವಾಸೀ ತಾಣಗಳನ್ನಾಗಿ ರೂಪಿಸಲು ಕ್ರಮ ವಹಿಸುವುದಾಗಿ ಘೋಷಿಸಿದರು.

ಪ್ರಶಸ್ತಿ ಸ್ವೀಕರಿಸಿದ ಪ್ರೊ ಜಯದೇವ್ ಅವರು ತಮ್ಮ ಕೃತಜ್ಞತಾ ಭಾಷಣದಲ್ಲಿ ಮಕ್ಕಳಲ್ಲಿ ಅಹಿಂಸಾ ಮನೋಧರ್ಮವನ್ನು ಬಿತ್ತಲು ಮಾತೃ ಭಾಷಾ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಒತ್ತಾಯಿಸಿದರಲ್ಲದೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ತಮ್ಮ ದೀನಬಂಧು ಸೇವಾ ಸಂಸ್ಥೆ ನಡೆಸುತ್ತಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯ ದೊರೆತಿದೆ ಎಂಬುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರವು ತೆರೆದಿರುವ ಒಂದು ಸಾವಿರ ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನುಕೂಲತೆಗಳು, ಪ್ರಯೋಜನ ಹಾಗೂ ಲಾಭ ಕುರಿತಂತೆ ಸಾಧಕ-ಬಾಧಕಗಳನ್ನು ಅವಲೋಕಿಸಬೇಕೆಂದು ಆಗ್ರಹಿಸಿದರು.

ಈ ಮುನ್ನ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಐದು ಲಕ್ಷ ರೂ ನಗದು, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ಶಾಲು ಹಾಗೂ ಫಲ-ತಾಂಬೂಲವನ್ನು ಒಳಗೊಂಡ 2019 ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಪ್ರೊ ಜಿ ಎಸ್ ಜಯದೇವ್ ಅವರಿಗೆ ಪ್ರದಾನ ಮಾಡಿದರು. ಅಂತೆಯೇ, ಈ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ಬಿ ಎಸ್ ಪಾಟೀಲ್ ಅವರಿಗೂ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಗೌರವ ಅರ್ಪಿಸಿದರು.

ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ, ಸಾಹಿತಿ ಪ್ರೊ ಕೆ ಮರುಳಸಿದ್ದಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿಂದಿನ ನಿರ್ದೇಶಕ ಎನ್ ಆರ್ ವಿಶುಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವೈ ಕೆ ಮುದ್ದುಕೃಷ್ಣ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ ಕಪ್ಪಣ್ಣ ಅವರೂ ಸೇರಿದಂತೆ ಹಲವು ಗಣ್ಯರು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಮಹಾತ್ಮ ಗಾಂಧಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಒಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದ ಒಂದು ಭಾಗವಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಮಹಾತ್ಮ ಗಾಂಧಿ ಜೀವನ ಪಯಣದ ಛಾಯಾಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿರುವ ಈ ಪ್ರದರ್ಶನವು ಅಕ್ಟೋಬರ್ 3 ಮತ್ತು 4 ರಂದು ಬೆಳಿಗ್ಗೆ 10-00 ಗಂಟೆಯಿಂದ 5-00 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಉಚಿತ ಹಾಗೂ ಮುಕ್ತವಾಗಿದೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085