ಅಖಿಲ ಭಾರತ ಮಟ್ಟದಲ್ಲಿ ಸೆಪ್ಟಂಬರ್ 21017ರಲ್ಲಿ ಐ.ಬಿ.ಪಿ.ಎಸ್. ನಡೆಸುತ್ತಿರುವ ಬ್ಯಾಂಕಿಂಗ್ ಸೇವೆಗಳ ನೇಮಕಾತಿ ಪರೀಕ್ಷೆಯನ್ನು ಕೂಡಲೇ ತಡೆಹಿಡಿಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದ ನಿಯೋಗ ಇಂದು ಕೇಂದ್ರ ಸಚಿವರಾದ ಶ್ರೀ ಅನಂತ ಕುಮಾರ್ ಹಾಗೂ ಶ್ರೀ ರಮೇಶ್ ಜಿಗಜಣಗಿ ರವರೊಂದಿಗೆ ಕೇಂದ್ರ ವಿತ್ತ ಸಚಿವರಾದ ಶ್ರೀ ಅರುಣ್ ಜೇಟ್ಲಿ ಹಾಗೂ ಕೇಂದ್ರ ಆಡಳಿತ ಸುಧಾರಣ ರಾಜ್ಯ ಸಚಿವರಾದ ಶ್ರೀ ಜಿತೇಂದ್ರ ಸಿಂಗ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮನವಿಯಲ್ಲಿ ಕೆಳಕಂಡ ಅಂಶಗಳ ಬಗ್ಗೆ ಕೂಡಲೇ ಕ್ರಮ ವಹಿಸಲು ಒತ್ತಾಯಿಸಿತು.
1. ಸೆಪ್ಟಂಬರ್ 2017ರಲ್ಲಿ ಬ್ಯಾಂಕಿಂಗ್ ಸೇವೆಗಳಿಗೆ ಗ್ರೂಪ್ – ಎ ಅಧಿಕಾರಿಗಳು, ಗ್ರೂಪ್ – ಕಛೇರಿ ಸಹಾಯಕರುಗಳ ನೇಮಕಾತಿ ಕುರಿತಂತೆ ನಡೆಯಲಿರುವ ಬ್ಯಾಂಕಿಂಗ್ ಪರೀಕ್ಷೆಗಳನ್ನು ಸ್ಥಳೀಯ ಭಾಷಾ ಪ್ರೌಢಿಮೆ ಕುರಿತಾದ ಅಂಶ ಇತ್ಯರ್ಥವಾಗುವವರೆಗೆ ತಡೆಹಿಡಿಯಬೇಕು.
2. ಎಲ್ಲಾ ಬ್ಯಾಂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ಅನ್ಯಭಾಷಿಕ ಅಧಿಕಾರಿ ಸಿಬ್ಬಂದಿ ವರ್ಗದವರು ಕನ್ನಡ ಭಾಷೆಯನ್ನು ಕಡ್ಡಾಯವಾಗಿ 6 ತಿಂಗಳ ಒಳಗೆ ಕಲಿಯಬೇಕು. ಒಂದು ವೇಳೆ ಈಗಾಗಲೇ ನೇಮಕ ಹೊಂದಿ ಕನ್ನಡ ಬಾರದವರು 6 ತಿಂಗಳೊಳಗೆ ಕನ್ನಡ ಕಲಿಯದಿದ್ದರೆ ಅಂತಹ ನೌಕರರನ್ನು ನೇಮಕಾತಿ ನಿಯಮದನ್ವಯ ನಿಯಾಮಾನುಸಾರ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು.
3. ಸಂವಿಧಾನ ಗುರುತಿಸಿರುವ ಎಲ್ಲಾ 22 ಅಧಿಕೃತ ಭಾಷೆಗಳಲ್ಲಿ ಪರೀಕ್ಷೆಯ ಮಾಧ್ಯಮವು ಕಡ್ಡಾಯವಾಗಿ ಇರಬೇಕು.
4. ಇದೇ ರೀತಿಯಲ್ಲಿ ಕೇಂದ್ರ ಅಬಕಾರಿ ಸೇವೆಗಳು, ರೇಲ್ವೆ ಸೇವೆಗಳು, ಸ್ಟಾಫ್ ಸೆಲೆಕ್ಷನ್ ಸೇವೆ, ಜಿ.ಎಸ್.ಟಿ ಕಾಯ್ದೆ ಅನುಷ್ಠಾನದ ನೇಮಕಾತಿಗಳು ಸೇರಿದಂತೆ ಹಲವಾರು ಕೇಂದ್ರ ಸರ್ಕಾರ ನಡೆಸುವ ನೇಮಕಾತಿಗಳಲ್ಲಿ ಸ್ಥಳೀಯ ಭಾಷೆಗಳ ಅಭ್ಯರ್ಥಿಗಳಿಗೆ ಆಯಾಯಾ ರಾಜ್ಯಗಳಲ್ಲಿ ನೇಮಕಾತಿಗಳಿಗೆ ಪ್ರಾತಿನಿಧ್ಯ ಕಲ್ಪಿಸಬೇಕು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರುಗಳು ಪ್ರಸ್ತುತ ಸನ್ನಿವೇಶದಲ್ಲಿ ಕೂಡಲೇ ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ಕ್ರಮ ವಹಿಸಲು ಇಲಾಖಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಈ ನಿಯೋಗದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯರವರ ಜೊತೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಪ್ರೊ. ಎಸ್.ಎಲ್. ಭೈರಪ್ಪ, ಪ್ರೊ. ಕೆ. ಮರುಳಸಿದ್ದಪ್ಪ, ಡಾ. ಸಿದ್ದಲಿಂಗಯ್ಯ, ಶ್ರೀಮತಿ ಬಿ.ಟಿ. ಲಲಿತ ನಾಯಕ್, ಡಾ. ಎಲ್. ಹನುಮಂತಯ್ಯ, ಮಾಜಿ ರಾಜ್ಯಸಭಾ ಸದಸ್ಯರಾದ ಡಾ. ಬಿ. ಜಯಶ್ರೀ ಹಾಗೂ ಮಾಜಿ ಶಾಸಕರಾದ ಡಾ. ಮುಖ್ಯಮಂತ್ರಿ ಚಂದ್ರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಶ್ರೀ ರವೀಂದ್ರ ಬಿ.ಎಸ್. ಮತ್ತು ಶ್ರೀ ನಾರಾಯಣ ರಾಯಚೂರು ಮತ್ತು ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಕೆ. ಮುರಳಿಧರ ಅವರುಗಳು ಹಾಜರಿದ್ದರು.