ನ.2, ಬೆಂಗಳೂರು : ಪರಿವರ್ತನಾ ಯಾತ್ರೆ ಎನ್ನುವುದು ಮುಖ್ಯಮಂತ್ರಿಯನ್ನು ಬದಲಾಯಿಸುವ ಸಲುವಾಗಿ ಅಲ್ಲ. ಬದಲಾಗಿ ಪರಿವರ್ತನಾ ಯಾತ್ರೆ ಎನ್ನುವುದು ಕರ್ನಾಟಕದ ಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ನೆರವೇರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾರವರು ಅಭಿಪ್ರಾಯಪಟ್ಟರು.
ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನ ಮೈದಾನದಲ್ಲಿ ನಡೆದ ಬಿ.ಜೆ.ಪಿ ಕರ್ನಾಟಕ ಹಮ್ಮಿಕೊಂಡಿದ್ದ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಬೆಂಗಳೂರಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾರವರು, ಪರಿವರ್ತನಾ ಯಾತ್ರೆ ಇಂದಿನಿಂದ ಆರಂಭವಾಗಲಿದ್ದು ಯಡಿಯೂರಪ್ಪನವರು ಇದರ ನೇತೃತ್ವ ವಹಿಸಲಿದ್ದಾರೆ. ಸಿದ್ಧರಾಮಯ್ಯ ಸರ್ಕಾರವನ್ನು ಕಿತ್ತು ಹಾಕುವ ಸಲುವಾಗಿ ಪರಿವರ್ತನಾ ಯಾತ್ರೆ ಸಿದ್ಧವಾಗಿದೆ.
ಭ್ರಷ್ಟಾಚಾರ ಮುಕ್ತವಾದ, ಸರ್ವರ ಅಭ್ಯುದಯಕ್ಕೆ ಕಾರಣವಾಗಬೇಕಿರುವ ಸರ್ಕಾರ ರಚನೆಗಾಗಿ ಮೋದಿ ಹಾಗೂ ಯಡಿಯೂರಪ್ಪನವರ ನೇತೃತ್ವದ ಪಾರದರ್ಶಕ ಸರ್ಕಾರಕ್ಕಾಗಿ ಪರಿವರ್ತನಾ ಯಾತ್ರೆ ಎಂದರು.
ಭ್ರಷ್ಟಾಚಾರೀ ಕಾಂಗ್ರೆಸ್ ಸರ್ಕಾರ...
ಭ್ರಷ್ಟಾಚಾರದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಇಂದಿನ ಕರ್ನಾಟಕ ಸರ್ಕಾರ. ಬಿಜೆಪಿ ರಾಷ್ಟ್ರದ ಎಲ್ಲೆಡೆಗೂ ವಿಕಾಸಪರ್ವವನ್ನೇ ಆರಂಭಿಸಿದೆ. ಮೋದಿ ಸರ್ಕಾರದ ಪರಿಹಾರಗಳು ಕರ್ನಾಟಕದ ಜನತೆಗೆ ತಲುಪಲು ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ರೈಲ್ವೆ, ಮೆಟ್ರೋ ಇತ್ಯಾದಿಗಳಿಗೆ ಕಳುಹಿಸಿರುವ ಹಣವನ್ನ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕಳೆದುಬಿಟ್ಟಿದೆ.
ಕನ್ನಡ ರಾಜ್ಯೋತ್ಸವದ ಉತ್ಸಾಹವಿಲ್ಲದ ಕಾಂಗ್ರೆಸ್ ಸರ್ಕಾರ…
ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದನ್ನು ಬಿಟ್ಟು, ಟಿಪ್ಪು ಜಯಂತಿಯನ್ನು ಆಚರಿಸುವಲ್ಲಿ ಸರ್ಕಾರ ಮಗ್ನವಾಗಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಟಿಪ್ಪು ಜಯಂತಿ ಆಚರಿಸುವ ಸರ್ಕಾರದವರಿಗೆ ದೇಶದ ಸುರಕ್ಷತೆಯ ಕಾಳಜಿಯಿಲ್ಲ. ಹಲವು ಕಾರ್ಯಕರ್ತರ ಕೊಲೆಯನ್ನೂ ಕಾಂಗ್ರೆಸ್ ಸರ್ಕಾರ ಮೂಕವಾಗಿ ನೋಡುತ್ತಿದೆ. ಹಿಂದುಳಿದವರಿಗೆ ಗೌರವ ತಂದುಕೊಡುವ ವಿಧೇಯಕವನ್ನೂ ಸಿದ್ಧರಾಮಯ್ಯ ಸರ್ಕಾರ ವಿರೋಧಿಸಿದೆ. ಹಾಗಾಗಿ ನರೇಂದ್ರ ಮೋದಿಯವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಯಡಿಯೂರಪ್ಪನವರ ಸರ್ಕಾರವನ್ನು ಆರಿಸಿ ಕರ್ನಾಟಕದ ಅಭಿವೃದ್ಧಿಗೆ ಸಾಮಾನ್ಯ ಜನತೆ ಮನ ಮಾಡಬೇಕಿದೆ ಎಂದರು.
ಅರವಿಂದ ಲಿಂಬಾವಳಿಯವರು ಮಾತನಾಡಿ, ಕರ್ನಾಟಕದ ಪರಿವರ್ತನೆಗೆ ಮುನ್ನುಡಿಯಾಗಲಿರುವುದು ಇಂದಿನ ಪರಿವರ್ತನಾ ಯಾತ್ರೆ. ಕರ್ನಾಟಕದಲ್ಲಿರುವ ಭ್ರಷ್ಟಾಚಾರ ಕೊನೆಗೊಂಡು, ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಇಂದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿ.ಜೆ.ಪಿ ಕಾರ್ಯಕರ್ತರನ್ನು ಕೊಲೆ ಮಾಡಿಸುವ, ಜೈಲಿಗೆ ತಳ್ಳುವ ಕಾರ್ಯಗಳು ನೆಡೆಯುತ್ತಿವೆ. ಇದಕ್ಕೆ ವಿರುದ್ಧವಾಗಿ ಹೋರಾಟ ನಡೆಸುವಾಗ ಕೂಡಾ ತಡೆಯೊಡ್ಡುವ ಕುತಂತ್ರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸಿದ್ಧರಾಮಯ್ಯನವರನ್ನು ಕಂಡರೆ ಮೋದಿಯವರಿಗೆ ಹೆದರಿಕೆಯಿಲ್ಲ. ಬದಲಾಗಿ ಸಿದ್ಧರಾಮಯ್ಯನವರಿಗೆ ಮೋದಿಯವರನ್ನು ಕಂಡರೆ ಹೆದರಿಕೆ ಇರುವುದರಿಂದಲೇ ನಮ್ಮ ಐತಿಹಾಸಿಕ ಯಾತ್ರೆಗೆ ತಡೆ ಒಡ್ಡುತ್ತಿದ್ದಾರೆ. ಬರುವ ದಿನಗಳಲ್ಲಿ ಯಡಿಯೂರಪ್ಪನವರು ರಾಜ್ಯದ ಎಲ್ಲಾ ಸಮಸ್ಯೆಗಳನ್ನು ದೂರೀಕರಿಸಿ, ಕರ್ನಾಟಕದ ಪರಿವರ್ತನೆಯನ್ನು ಪರಿವರ್ತನಾ ಯಾತ್ರೆಯ ಮೂಲಕ ಯಶಸ್ವಿಗೊಳಿಸಲಿದ್ದಾರೆ ಎಂದರು.
ಪ್ರಹ್ಲಾದ್ ಜೋಷಿಯವರು ಮಾತನಾಡಿ, ಅಡೆತಡೆಯ ಮಧ್ಯೆಯೂ ಕಾರ್ಯಕರ್ತರು ಬರುತ್ತಿರುವುದು ಶ್ಲಾಘನೀಯ. ನಕ್ಸಲರು, ಪಿ.ಎಫ್.ಐ ನಂತವರನ್ನು ಬಿಟ್ಟು ಅಮಾಯಕ ಕಾರ್ಯಕರ್ತರ ಮೇಲೆ ಪೌರುಷ ತೋರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಖಂಡನೀಯ. ಮೋದಿಯವರ ಕಾರ್ಯವನ್ನು ವಿರೋಧಿಸುವುದನ್ನು ಬಿಟ್ಟರೆ ಅವರ ಅಭಿವೃದ್ಧಿ ಕಾರ್ಯಗಳನ್ನು ಇಂದಿನ ಸರ್ಕಾರ ಗಮನಿಸುತ್ತಲ್ಲ ಎಂದರು.
ಶ್ರೀರಾಮುಲುರವರು ಮಾತನಾಡಿ, ಇಂದಿನ ಮುಖ್ಯಮಂತ್ರಿಗಳು ಜಾತಿ ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುತ್ತಿದ್ದಾರೆ. ಸಿದ್ಧರಾಮಯ್ಯನವರು ದುರಹಂಕಾರದಿಂದ ನಮ್ಮ ನಂಬಿಕೆಯಾದ ಧರ್ಮಸ್ಥಳಕ್ಕೆ ದ್ರೋಹಬಗೆದಿದ್ದಾರೆ. ಕಾರ್ಯಕರ್ತರನ್ನು ತಡೆದರೂ ಅವರ ಅಭಿಮಾನವನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಮತ್ತೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವ ಸುಮುಹೂರ್ತ ರಾಜ್ಯಕ್ಕೆ ಸನ್ನಿಹಿತವಾಗಲಿ ಎಂದು ಹಾರೈಸಿದರು.
ಕೆ.ಎಸ್. ಈಶ್ವರಪ್ಪನವರು ಮಾತನಾಡಿ, ಸಿದ್ಧರಾಮಯ್ಯನವರು ಕನ್ನಡಿಗರನ್ನು ಪೂರ್ಣವಾಗಿ ಮರೆತಿದ್ದಾರೆ. ಸಿದ್ಧರಾಮಯ್ಯನವರು ಇದುವರೆಗೆ ತಾವು ನೀಡಿದ ಎಲ್ಲಾ ಆಶ್ವಾಸನೆಗಳನ್ನೂ ಈಡೇರಿಸಬೇಕು. ಸರ್ಕಾರದ ವಿದ್ಯಾಸಿರಿಯಂತಹ ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಲೇ ಇಲ್ಲ. ಹಿಂದುಳಿದ ವರ್ಗದವರ ನಿರ್ಲಕ್ಷ್ಯವನ್ನು ಕೂಡಾ ಸಿದ್ಧರಾಮಯ್ಯನವರೇ ಮಾಡುತ್ತಿದ್ದಾರೆ. ಇದು ಇಡೀ ಕನ್ನಡಿಗರಿಗೇ ಬಗೆದ ದ್ರೋಹವಾಗಿದೆ. ರಾಷ್ಟ್ರೀಯ ಹಿಂದುಳಿದ ವರ್ಗದ ಆಯೋಗವನ್ನು ಮಾಡಿ, ಹಿಂದುಳಿದ ವರ್ಗಗಳ ಅಭ್ಯುದಯಕ್ಕೆ ನಿಜವಾಗಿ ಶ್ರಮಿಸಿದವರು ನರೇಂದ್ರ ಮೋದಿಯವರು. ಹಾಗಾಗಿ ಸಿದ್ಧರಾಮಯ್ಯನವರು ಢೋಂಗಿ ಹಿಂದುಳಿದ ನಾಯಕರಂತೆ ವರ್ತಿಸುತ್ತಿರುವವರು ಎಂದು ಜನರೇ ಈಗ ಗುರುತಿಸುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರಿಗೆ ಸಹಕಾರವನ್ನು ನೀಡುತ್ತಾ, ಬಿ.ಜೆ.ಪಿ ಕಾರ್ಯಕರ್ತರನ್ನು ಜೈಲಿಗೆ ತಳ್ಳುವ ಕಾರ್ಯವನ್ನು ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರವಿರಲಿ. ದೇಶರಕ್ಷಣೆಗೆ ನಿಂತಿರುವ ನರೇಂದ್ರ ಮೋದಿಗೆ ಜಯಕಾರವಿರಲಿ ಎಂದರು.
ಅನಂತಕುಮಾರ್ ಹೆಗಡೆಯವರು ಮಾತನಾಡಿ, ಕರ್ನಾಟಕದ ಜನ ಹೇಗೆ ಕಷ್ಟಪಡುತ್ತಿದ್ದಾರೆ ಎನ್ನುವುದು ಸಿದ್ಧಣ್ಣನಿಗೆ ಗೊತ್ತಿಲ್ಲ. ಸಂಸ್ಕೃತಿ ಸಂಸ್ಕಾರ ಗೊತ್ತಿಲ್ಲದವರು, ಪರಂಪರೆಗಳ ಅರಿವಿಲ್ಲದವರು ರಾಜಕೀಯ ಮಾಡಲು ನಾಲಾಯಕ್. ರಾಜ್ಯದಲ್ಲಿ ಗಮನಾರ್ಹ ಬದಲಾವಣೆ ತರುವ ಸಲುವಾಗಿ ಆರಂಭವಾಗಿರುವ ಪರಿವರ್ತನಾ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸದಾನಂದಗೌಡರು ಮಾತನಾಡಿ, ನವಕರ್ನಾಟಕ ನಿರ್ಮಾಣಕ್ಕೆ ಹೊಸದಿಕ್ಕನ್ನು ಕೊಡಲು ಪ್ರಾರಂಭೋತ್ಸವ ಇಂದಿನ ಪರಿವರ್ತನಾ ಯಾತ್ರೆ. ಭಾರತ ಯಶಸ್ವೀ ರಾಷ್ಟ್ರವಾಗಿ ಮುಂದೆ ಬರಬೇಕಾದರೆ ಎಲ್ಲಾ ರಾಜ್ಯಗಳೂ ಮುಂದೆ ಬರಬೇಕಿದೆ. ಅದಕ್ಕೆ ಬೇಕಾಗಿ ಕರ್ನಾಟಕದ ಭ್ರಷ್ಟಾಚಾರ ಪರವಾದ ಸರ್ಕಾರವನ್ನು ಕಿತ್ತುಹಾಕಿ, ಭ್ರಷ್ಟಾಚಾರ ಮುಕ್ತವಾದ ಸರ್ಕಾರಕ್ಕೆ ನಾಂದಿಯಾಗಬೇಕಿರುವುದು ಇಂದಿನ ಪರಿವರ್ತನಾ ಯಾತ್ರೆ. ಸಾಮಾನ್ಯ ಜನರಿಗೆ ಇಂದಿನ ದುರಾಡಳಿತದ ಬಗ್ಗೆ ತಿಳುವಳಿಕೆ ನೀಡಿ ರಾಜಕೀಯದಲ್ಲಿ, ಕರ್ನಾಟಕದ ಇತಿಹಾಸದಲ್ಲಿ ಹೊಸ ಮನ್ವಂತರವನ್ನೇ ಪ್ರಾರಂಭಿಸೋಣ ಎಂದರು.
ಅನಂತ್ ಕುಮಾರ್ ರವರು ಮಾತನಾಡಿ, ಇಡೀ ಕರ್ನಾಟಕದಲ್ಲಿ ಇದೀಗ ಒಂದು ಪರಿವರ್ತನೆಯ ಗಾಳಿ ಬೀಸುತ್ತಿದೆ. ಕರ್ನಾಟಕದಲ್ಲಿ ಆಡಳಿತ ವ್ಯವಸ್ಥೆಯ ಪರಿವರ್ತನೆ ಆಗಬೇಕಿದೆ. ಕಾಂಗ್ರೆಸ್ ಸಾಕು, ಬಿಜೆಪಿ ಬೇಕು. ಸಿದ್ಧರಾಮಯ್ಯ ಸಾಕು, ಯಡಿಯೂರಪ್ಪ ಬೇಕು. ರಾಹುಲ್ ಬೇಡ, ಮೋದಿ ಬೇಕು. ಕೈಕೊಟ್ಟ ಕೈ ಸಾಕು, ಭಾಗ್ಯ ಅರಳಿಸುವ ಕಮಲ ಬೇಕು ಎಂದೆನ್ನುವ ಪರಿವರ್ತನೆ ಆಗಬೇಕಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದನ್ನು ಸಾಕಾರಗೊಳಿಸುವ ಸಲುವಾಗಿ ಪರಿವರ್ತನಾ ಯಾತ್ರೆ. ಮೋದಿ ಮಾಡೆಲ್ ನ್ನು ಯಡಿಯೂರಪ್ಪನವರು ಕರ್ನಾಟಕದಲ್ಲಿ ತೋರಲಿದ್ದಾರೆ ಎಂದು ಭರವಸೆ ನೀಡಿದರು.
ಬಿ. ಎಸ್ ಯಡಿಯೂರಪ್ಪನವರು ಮಾತನಾಡಿ, ಭ್ರಷ್ಟ ಆಡಳಿತವನ್ನು ಕೊನೆಗೊಳಿಸಿ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸಲು, ರಾಜ್ಯದ ಜನತೆಯ ಸಹಕಾರ ಬೇಕಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸುವ ಯಾತ್ರೆ ಈ ಬಗ್ಗೆ ಜಾಗೃತಿ ಮೂಡಿಸಲಿದೆ. ರಾಜ್ಯದ ಎಲ್ಲರ ವೃದ್ಧಿಗಾಗಿ ಸಂಕಲ್ಪಬದ್ಧವಾಗಿರುವುದು ಬಿಜೆಪಿ. ರಾಜಕೀಯ ಯುದ್ಧ ಈಗಾಗಲೇ ಆರಂಭವಾಗಿದೆ. ಅದರಲ್ಲಿ ಬಿಜೆಪಿ ಗೆಲುವು ಸಾಧ್ಯವಾಗಿಸಲು ಪ್ರತೀ ಪ್ರಜೆಯೂ ತಮ್ಮ ಪಾತ್ರ ನಿರ್ವಹಿಸಬೇಕಿದೆ. ಬೇಜವಾಬ್ದಾರಿಯುತ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು, ಬಿಜೆಪಿಯ ಸುಭದ್ರ ಕೋಟೆಯನ್ನು ಕರ್ನಾಟಕದಲ್ಲಿ ಭದ್ರಪಡಿಸೋಣ. ರೈತನ ಕಣ್ಣೀರನ್ನು ಒರೆಸುವ ಸಲುವಾಗಿ ಯಡಿಯೂರಪ್ಪ ಹಾಗೂ ಬಿಜೆಪಿ ಯಾವಾಗಲೂ ಸಿದ್ಧ. ಸುವರ್ಣಗ್ರಾಮ ಯೋಜನೆಯಂತಹ ಹಲವು ಯೋಜನೆಗಳು ಯಡಿಯೂರಪ್ಪ, ಪ್ರಜೆಗಳ ಆಶೀರ್ವಾದದಿಂದ ಮಾಡಿರುವುದು ಕರ್ನಾಟಕದ ಜನರಿಗೆ ತಿಳಿದಿದೆ. ಈ ದೇಶ ಕಂಡ ಅತ್ಯಂತ ಭ್ರಷ್ಟ ರಾಜಕಾರಣಿ ಸಿದ್ಧರಾಮಯ್ಯನವರೇ ಆಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಬಿಜೆಪಿ ಸನ್ನದ್ಧವಾಗಿದೆ ಎಂದು ಹೇಳಿದರು.
ದಿನವಿಶೇಷ...
ಪರಿವರ್ತನಾ ಯಾತ್ರೆಯ ಥೀಮ್ ಸಾಂಗ್ ನೊಡನೆ ಕಾರ್ಯಕ್ರಮಕ್ಕೆ ಶುಭಾರಂಭ ಒದಗಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಸಿ.ಪಿ.ಯೋಗೀಶ್ವರ್ ಹಾಗೂ ರಾಜೀವ್ ರವರು ಬಿ.ಜೆ.ಪಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು.
ಅನೇಕ ಗಣ್ಯಮಾನ್ಯರು, ಲಕ್ಷಾಂತರ ಕಾರ್ಯಕರ್ತರು ಈ ಭವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.