ಬೆಂಗಳೂರು. ಸೆ.7: ಸಾರ್ವಜನಿಕ ಆಸ್ತಿಯಾಗಿ ಸೃಜಿಸಲ್ಪಡಬಹುದಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ಸೂಚಿಸಿದರು.
ವಿಧಾನಸೌದಲ್ಲಿಂದು ಕೆಆರ್‍ಡಿಸಿಎಲ್ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಿಗಮವು ಸಾರ್ವಜನಿಕ ಆಸ್ತಿಯಾಗಿ ರೂಪುಗೊಳ್ಳುವ ಉತ್ತಮ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು, ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ರಸ್ತೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು. ಪೈಪ್ ಲೈನ್, ಕೇಬಲ್ ಹಾಗು ರಸ್ತೆ ತಡೆಗಳನ್ನು ಅಳವಡಿಸಲು ರಸ್ತೆಗಳನ್ನು ಹಾಳಾಗುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತಮ ತಂತ್ರಜ್ಞಾನ ಅಳವಡಿಕೆ ಮೂಲಕ ರಸ್ತೆಗಳನ್ನು ನಿರ್ವಹಣೆ ಮಾಡಿ, ರಸ್ತೆ ತಡೆಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಅಳವಡಿಸಲು ಕ್ರಮಕೈಗೊಳ್ಳಬೇಕು. ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ವಿಳಂಬ ನೀತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಕಾಮಗಾರಿಯ ವೆಚ್ಚವೂ ಅಧಿಕವಾಗುತ್ತದೆ. ನಿಗಮವು ಸದೃಡವಾಗಲು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ನೆರೆಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟ ಜಾತಿ ಪಂಗಡದ ಸಮುದಾಯದವರಿಗೆ ಮೂಲಭೂತಸೌಕರ್ಯ ಒದಗಿಸಲು ಎಲಿವೇಟೆಡ್ ಕಾರಿಡಾರ್ ಅನುದಾನವನ್ನು ಎಸ್‍ಸಿಪಿ ಹಾಗು ಟಿಎಸ್‍ಪಿ ಯೋಜನೆಗೆ ನೀಡಲು ಸೂಚಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಶ್ರೀ ರಜನೀಶ್ ಗೋಯಲ್, ಕಾರ್ಯದರ್ಶಿ ಶ್ರೀ ಗುರುಪ್ರಸಾದ್, ಮೂಲಭೂತಸೌಕರ್ಯಗಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಕಪಿಲ್ ಮೋಹನ್, ಹಣಕಾಸು ಇಲಾಖೆಯ ಕಾರ್ಯದರ್ಶಿ ಡಾ.ಪಿ.ಸಿ. ಜಾಫರ್, ಉಪಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಶ್ರೀ ವಿ.ಶ್ರೀನಿವಾಸ, ಕೆಶಿಪ್ ಸಿಪಿಓ ಶ್ರೀ ಕೃಷ್ಣರೆಡ್ಡಿ, ಕೆಆರ್‍ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶಿವಕುಮಾರ್ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳು ಹಾಜರಿದ್ದರು.