Sunday, 8th September 2024
 
Advertise With Us | Contact Us

ಕಂಬಳದ ವೇಗದೂತ ಶ್ರೀನಿವಾಸ ಗೌಡ ಅವರಿಗೆ ಮುಖ್ಯಮಂತ್ರಿಗಳಿಂದ ಸನ್ಮಾನ

ಬೆಂಗಳೂರು, 17 ಫೆಬ್ರವರಿ 2020
ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಜಾನಪದ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡಿದ ನಾಡಿನ ಗಮನ ಸೆಳೆದ ಶ್ರೀನಿವಾಸ ಗೌಡ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಅಪರಾಹ್ನ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಸನ್ಮಾನ ಮಾಡಿ, ಕಟ್ಟಡ ಕಾರ್ಮಿಕರೂ ಆಗಿರುವ ಶ್ರೀನಿವಾಸ ಗೌಡ ಅವರಿಗೆ ಕಾರ್ಮಿಕ ಇಲಾಖೆ ವತಿಯಿಂದ ಮೂರು ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಕಂಬಳ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡುವ ಮೂಲಕ ಶ್ರೀನಿವಾಸ ಗೌಡ ಅವರು ನಾಡಿನ ಗಮನ ಸೆಳೆದಿದ್ದಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವರಿಗೆ ಕ್ರೀಡಾ ಲೋಕದಲ್ಲಿ ಬೆಳೆದು ಬೆಳಗಲು ವಿಪುಲ ಅವಕಾಶಗಳನ್ನು ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವೂ ಕೂಡಾ ಮುಂದೆ ಬಂದಿರುವುದು ಶ್ಲಾಘನೀಯ. ಕೋಣಗಳ ಜೊತೆ 146 ಮೀಟರ್ ಓಟವನ್ನು 13.68 ಸೆಕೆಂಡುಗಳಲ್ಲಿ ಓಡಿ ದಾಖಲೆ ಸ್ಥಾಪಿಸಿದ ಶ್ರೀನಿವಾಸ ಗೌಡ ಅವರ ಸಾಧನೆ ಅತ್ಯಂತ ಸಂತಸದ ವಿಷಯವಾಗಿದೆ. ಇದರಿಂದ ಜಾನಪದ ಕ್ರೀಡೆ ಎನಿಸಿರುವ ಕಂಬಳಕ್ಕೆ ಜಗತ್ತಿನಾದ್ಯಂತ ಮನ್ನಣೆ ದೊರೆತಂತಾಗಿದೆ ಎಂದು ಮುಖ್ಯಮಂತ್ರಿ ಬಣ್ಣಿಸಿದರು.

ಅಲ್ಲದೆ, ಕಂಬಳ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಕ್ರೀಡಯಾಗಿದ್ದು, ಶ್ರೀನಿವಾಸ ಗೌಡ ಅವರು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ.ಟಿ. ರವಿ ಅವರು ಮಾತನಾಡಿ ಶ್ರೀನಿವಾಸಗೌಡ ಅವರ ಈ ಸಾಧನೆಗೆ ಅಭಿನಂದನೆಗಳು. ಅವರು ಇಚ್ಫಿಸಿದಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವನ್ನಾಗಿ ತರಬೇತಿ ನೀಡುವಲ್ಲಿ ರಾಜ್ಯ ಸರ್ಕಾರವೇ ಎಲ್ಲಾ ಜವಾಬ್ದಾರಿ ನಿರ್ವಹಿಸಲು ಸಿದ್ಧವಿದೆ. ಅವರಿಗೆ ಕ್ರೀಡೆಗಳಲ್ಲಿ ಭಾಗವಹಿಸುವ ಅರ್ಹತಾ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಅವರು ತೇರ್ಗಡೆ ಹೊಂದಿದಲ್ಲಿ ಸರ್ಕಾರವೇ ಅವರ ತರಬೇತಿ ವೆಚ್ಚವನ್ನು ಭರಿಸಲಿದೆ ಎಂದು ವಿವರಿಸಿದರು.

ಪ್ರಸ್ತುತ ತಾವು ಒಪ್ಪಿಕೊಂಡಿರುವ ಕಂಬಳಗಳನ್ನು ಪೂರ್ಣಗೊಳಿಸಿ ಮಾರ್ಚ್ 10 ರ ನಂತರ ತಮ್ಮ ಕ್ರೀಡಾ ಇಲಾಖೆ ನಡೆಸುವ ಅರ್ಹತಾ ಪರೀಕ್ಷೆಗೆ ಹಾಜರಾಗಲು ಶ್ರೀನಿವಾಸ ಗೌಡ ಅವರು ಸಮ್ಮಿತಿಸಿದ್ದಾರೆ. ಅಲ್ಲದೆ, ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸಲಿದೆ ಎಂದು ಹೇಳಿದರು.

ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಶ್ರೀನಿವಾಸಗೌಡ ಅವರು ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರ ಈ ಸಾಧನೆಯನ್ನು ಪರಿಗಣಿಸಿ ಕಾರ್ಮಿಕ ಇಲಾಖೆ ಮೂರು ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.

ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಯಾಪ್ಟನ್ ಅಜಯ್ ಕುಮಾರ್ ಬಾಲ್ ಅವರು ಮಾತನಾಡಿ ದೇಶದ ಗಮನ ಸೆಳೆದಿರುವ ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಿ ರಾಷ್ಟ್ರ ಮಟ್ಟದ ಕ್ರೀಡಾಪಟುವನ್ನಾಗಿ ರೂಪಿಸಲು ಕ್ರೀಡಾ ಪ್ರಾಧಿಕಾರ ಉತ್ಸುಕವಾಗಿದೆ. ಶ್ರೀನಿವಾಸ ಗೌಡ ಅವರು ಈಗಾಗಲೇ ಒಪ್ಪಿಕೊಂಡಿರುವ ಕಂಬಳಗಳ ನಂತರ ಪ್ರಾಧಿಕಾರವನ್ನು ಸಂಪರ್ಕಿಸಿದ್ದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲು ತಾವು ಸಂತೋಷದಿಂದ ನಿರೀಕ್ಷಿಸುವುದಾಗಿ ನುಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಗೌಡ ಅವರು ಸರ್ಕಾರದ ಗೌರವ ತಮಗೆ ಅತ್ಯಂತ ಸಂತಸ ತಂದಿದ್ದು, ಸರ್ಕಾರದ ಈ ನಿಲುವಿಗೆ ಧನ್ಯವಾದವನ್ನು ಅರ್ಪಿಸಿದರು. ಇದರಿಂದ ಹೊರಗಿನ ಜಗತ್ತಿಗೆ ಕಂಬಳವನ್ನು ಪರಿಚಯಿಸಿದಂತಾಗಿದೆ. ಈ ಸಾಧನೆಗೆ ತಮ್ಮ ಜೊತೆಗೆ ಓಡಿದ ಕೋಣಗಳು ಹಾಗೂ ಅದರ ಮಾಲೀಕರು ಕಾರಣವಾಗಿದ್ದು ಅವರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು.

ಕಳೆದ ಒಂದು ತಿಂಗಳ ಹನ್ನೆರಡು ಕಂಬಳ ಕ್ರೀಡಾ ಕೂಟಗಳಲ್ಲಿ 35 ಕ್ಕೂ ಹೆಚ್ಚು ಮೆಡೆಲ್‍ಗಳನ್ನು ವಿವಿಧ ನಾಲ್ಕು ವಿಭಾಗಗಳಲ್ಲಿ ಪಡೆದಿದ್ದು, ಇನ್ನೂ ಮೂರೂ ಕಂಬಳ ಪಂದ್ಯಗಳು ಬಾಕಿ ಇದೆ. ಅದರಲ್ಲಿಯೂ ಕೂಡಾ ಶ್ರೀನಿವಾಸ ಗೌಡ ಅವರು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ. ಮಣಿವಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಕಂಬಳ ಸಂರಕ್ಷಣೆ ಮತ್ತು ತರಬೇತಿ ಅಕಾಡೆಮಿಯ ಗುಣಪಾಲ್ ಕದಂಬ ಒಳಗೊಂಡಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಖಾಲಿ ಲಕೋಟೆ ಅಲ್ಲ ! ಅಭಿನಂದನಾ ಪತ್ರ ಇತ್ತು !!

ಕಂಬಳದ ಓಟಗಾರ ಶ್ರೀ ಶ್ರೀನಿವಾಸ ಗೌಡ ಅವರನ್ನು ಇಂದು ಮಧ್ಯಾಹ್ನ ವಿಧಾನ ಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸನ್ಮಾನಿಸಿದ ಸಂದರ್ಭದಲ್ಲಿ ಕಾರ್ಮಿಕ ಸಚಿವರು ನೀಡಿದ ಲಕೋಟೆಯಲ್ಲಿ ಮೂರು ಲಕ್ಷ ರೂ ನೀಡುವ ಘೋಷಣೆಯನ್ನು ಒಳಗೊಂಡ ಅಭಿನಂದನಾ ಪತ್ರ ಇತ್ತು.

ಅಲ್ಲದೆ, ಕಾರ್ಮಿಕ ಸಚಿವರ ಆಶಯದ ಬೆನ್ನಲ್ಲೇ, ಪತ್ರ ನೀಡಿದ ಒಂದು ತಾಸಿನೊಳಗೇ ಮೂರು ಲಕ್ಷ ರೂ ಚೆಕ್ ವಿತರಿಸಲಾಯಿತು ಎಂಬ ಅಂಶವನ್ನು ಸ್ಪಷ್ಟಪಡಿಸಿದೆ.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085