ಬೆಂಗಳೂರು, ಆಗಸ್ಟ್ 23 ( ಕರ್ನಾಟಕ ವಾರ್ತೆ):
ಗೌರಿ ಮತ್ತು ಗಣೇಶ ಹಬ್ಬದ ಸುಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ.
ಗೌರಿ ಪ್ರೀತಿ ಮತ್ತು ವಾತ್ಸಲ್ಯದ ಪರ್ವತ ! ಗಣೇಶ ಭಕ್ತಿ, ಯುಕ್ತಿ ಹಾಗೂ ಶಕ್ತಿಯ ಸಾಗರ !! ಒಂದರ ಹಿಂದೆ ಒಂದರಂತೆ ಬರುವ ಈ ಎರಡೂ ಹಬ್ಬಗಳು, ಹಬ್ಬಗಳ ಸಾಲಿನಲ್ಲೇ ವಿಶೇಷ, ವಿಶಿಷ್ಠ ಹಾಗೂ ವಿಭಿನ್ನ !!!
ಜೀವನದ ಆರಂಭದಿಂದ ಅಂತ್ಯದವರೆಗೆ ನಡೆಯುವ ಎಲ್ಲಾ ಸಮಾರಂಭಗಳಲ್ಲೂ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲೂ ವಿಘ್ನಗಳ ನಿವಾರಕ ಶ್ರೀ ವಿನಾಯಕನಿಗೇ ಅಗ್ರ ಪೂಜೆ. ಹೀಗಿರುವಾಗ, ಗಣೇಶನ ಪೂಜಿಸುವ ಮುನ್ನವೇ ಗೌರಿ ಹಬ್ಬದ ಆಚರಣೆ ಅಮ್ಮನಿಗೆ ಅಗ್ರ ಸ್ಥಾನ ನೀಡಿ ಗೌರವಿಸಿದಂತೆಯೇ.
ಸ್ವಾತಂತ್ರ್ಯಾ ಪೂರ್ವದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಹಬ್ಬ ಆಚರಣೆಗೆ ಚಾಲನೆ ನೀಡುವ ಮೂಲಕ ಎಲ್ಲೆಡೆ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನದ ಕಹಳೆಯನ್ನು ಮೊಳಗಿಸಿದರು. ಅಷ್ಟೇ ಅಲ್ಲ ! ಸಾಮೂಹಿಕ ಗಣೇಶ ಹಬ್ಬದ ಆಚರಣೆ ಎಲ್ಲರನ್ನೂ ಒಂದುಗೂಡಿಸುತ್ತಿತ್ತು ಎಂಬುದು ಇದೀಗ ಇತಿಹಾಸ.
ಪರಿಸರ-ಸ್ನೇಹಿ ಗೌರಿ-ಗಣೇಶ ವಿಗ್ರಹಗಳನ್ನು ಪೂಜಿಸೋಣ. ಸಂಕುಚಿತ ಭಾವದಿಂದ ದೂರವಾಗಿ ಎಲ್ಲರ ಜೊತೆಯಲ್ಲಿ ಬೆರೆತು ಸಡಗರ ಹಾಗೂ ಸಂಭ್ರಮವನ್ನು ಹಂಚಿಕೊಳ್ಳೋಣ. ಎಲ್ಲರೂ ಒಗ್ಗೂಡಿ ಬಲಿಷ್ಠ ಭಾರತವನ್ನು ನಿರ್ಮಿಸಿ ಹೊಸ ಇತಿಹಾಸವನ್ನು ಸೃಷ್ಠಿಸೋಣ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.