ಬೆಂಗಳೂರು. ಆ.29: ರಾಜ್ಯದಲ್ಲಿ ಮಳೆ ಹಾಗು ನೆರೆ ಹಾವಳಿಯಿಂದ 8 ಸಾವಿರ ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ ಹಾಗು ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿದ್ದು, ಈ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪುನರ್ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಹಾಗು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿಯು 645 ಕಿ.ಮೀ ಹಾನಿಗೊಳಗಾಗಿದ್ದು, ರಾಜ್ಯ ಹೆದ್ದಾರಿಯು 1166 ಕಿ.ಮೀ, 2341 ಕಿ.ಮೀ ಎಂಡಿಆರ್ ರಸ್ತೆಗಳು ಹಾನಿಗೊಳಗಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ 34 ಸಿಡಿ ಮತ್ತು ಸೇತುವೆಗಳು, ರಾಜ್ಯ ಹೆದ್ದಾರಿಯಲ್ಲಿರುವ 432 ಹಾಗು ಎಂಡಿಆರ್ ರಸ್ತೆಯಲ್ಲಿರುವ 696 ಸಿಡಿ ಮತ್ತು ಸೇತುವೆಗಳು ಬಾದಿತಗೊಂಡಿವೆ. ಸಾರ್ವಜನಿಕರಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ತುರ್ತಾಗಿ ಈ ಕಾಮಗಾರಿಗಳ ಪುನರ್ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ 500 ಕೋಟಿ ರೂ. ವೆಚ್ಚದಲ್ಲಿ ಕೂಡಲೇ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 10 ಸಾವಿರ ಕೋಟಿ ರೂ. ಅನುದಾನವಿದ್ದು, 2,500 ಕೋಟಿ ವೆಚ್ಚದ ಬಿಲ್ಲುಗಳು ಬಾಕಿ ಇವೆ ಎಂದು ಅವರು ತಿಳಿಸಿದರು.
ರಸ್ತೆಗಳ ಇಕ್ಕೆಡೆಗಳಲ್ಲಿ ಚರಂಡಿ, ಗಿಡ ಮರ ಬೆಳೆದಿದ್ದು, ಒತ್ತುವರಿಯಾಗಿವೆ. ರಸ್ತೆಗಳ ನಿರ್ವಹಣೆಯು ಮಹತ್ವದ್ದಾಗಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಗಳ ನಿರ್ವಹಣೆ ಕೈಗೊಳ್ಳಲು ಸೂಚಿಸಲಾಗಿದೆ. ಕೆಳ ಹಂತದ ಅಧಿಕಾರಿಗಳು ದಿನಚರಿಯನ್ನು ಬದಲಿಸಿಕೊಂಡು ಬೆಳಿಗ್ಗೆ 9 ಗಂಟೆಗೆ ಕ್ಷೇತ್ರ ವೀಕ್ಷಣೆಗೆ ತೆರಳಿ, ಮಧ್ಯಾಹ್ನದ ನಂತರ ಕಚೇರಿ ದೈನಂದಿನ ಕಾರ್ಯ ನಿರ್ವಹಿಸಬೇಕು. ಪ್ರತಿ ಮಾಹೆ ದಿನಚರಿಯನ್ನು ತಮ್ಮ ಮೇಲಾಧಿಕಾರಿಗಳಿಗೆ ಕಳುಹಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು. ಅವೈಜ್ಞಾನಿಕ ರಸ್ತೆ ನಿಲುಗಡೆಗಳನ್ನು ತೆರವುಗೊಳಿಸಬೇಕು. ಪ್ರತಿ ವರ್ಷ ರಸ್ತೆ ಅಪಘಾತದಿಂದ 10 ಸಾವಿರ ಜನರು ಮೃತರಾಗುತ್ತಿದ್ದಾರೆ. ಇಂತಹ ಸ್ಥಳಗಳನ್ನು ಗುರುತಿಸಿ ಅಪಘಾತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ವಸತಿ ಶಾಲೆ ಶಿಕ್ಷಣಕ್ಕೆ ಉತ್ತೇಜನ: ಶ್ರೀ ಗೋವಿಂದ ಎಂ. ಕಾರಜೋಳ
ಬೆಂಗಳೂರು. ಆ.29: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ವಿದ್ಯಾರ್ಥಿಗಳ ಫಲಿತಾಂಶ ಅತ್ಯುತ್ತಮವಾಗಿದ್ದು, ವಸತಿ ಶಾಲೆ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಶೇ.95 ರಷ್ಟಿದ್ದು, ಅದರಲ್ಲೂ ಪ್ರಥಮ ದರ್ಜೆಯಲ್ಲೇ ಅಧಿಕ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಕೆಲವು ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಕೆಲವು ವಸತಿ ಶಾಲೆಗಳ ನಿರ್ಮಾಣಕ್ಕೆ ನಿವೇಶನಗಳಿರುವುದಿಲ್ಲ. ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಈ ಹಿಂದೆ ಹರಿಜನ ಪ್ರದೇಶಗಳಿಗೂ ಭೇಟಿ ನೀಡಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಸ್ಥಿತಿಗತಿಯ ಬಗ್ಗೆ ಹೆಚ್ಚಾಗಿ ಗೊತ್ತಿದೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಸತಿ ಶಾಲೆ ಶಿಕ್ಷಣ ಸಂಸ್ಥೆಗಳಿಗೆ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯು ಈ ಹಿಂದೆ ಕೇವಲ ವಸತಿ ನಿಲಯ ಹಾಗು ವಸತಿ ಶಾಲೆ ನಡೆಸುವುದು ಪ್ರಮುಖ ಕಾರ್ಯಕ್ರಮವನ್ನಾಗಿ ಅನುಷ್ಟಾನಗೊಳಿಸುತ್ತಿತ್ತು. ಸ್ವಯಂ ಉದ್ಯೋಗದಡಿ ಬೆರಳೆಣಿಕೆಯಷ್ಟು ಫಲಾನುಭವಿಗಳಿಗೆ ಧನ ಸಹಾಯ ನೀಡುತ್ತಿತ್ತು. ಸಮಾಜ ಕಲ್ಯಾಣ ಇಲಾಖೆಯು ಪ್ರಮುಖ ಇಲಾಖೆಯಾಗಿದ್ದು, ಪರಿಶಿಷ್ಟ ಜನಾಂಗದ ಅಭಿವೃದ್ಧಿಯು ಇಲಾಖೆಯ ಆಶಯವಾಗಿದ್ದು, ಇದರ ಆಶಯದಂತೆ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತ ನಿರುದ್ಯೋಗಿಗಳ ಪ್ರಮಾಣ ಹೆಚ್ಚಾಗಿರುವುದರಿಂದ ಕೂಡಲೇ ಉದ್ಯೋಗ ದೊರಕುವಂತಹ ಕ್ಷೇತ್ರಗಳಾದ ವಾಹನ ಚಾಲನಾ ತರಬೇತಿ, ಮೊಬೈಲ್ ರಿಪೇರಿ, ಟಿವಿ ರಿಪೇರಿ, ಕಟ್ಟಡ ನಿರ್ಮಾಣ ತರಬೇತಿ, ಚರ್ಮ ಉದ್ಯಮ ಕ್ಷೇತ್ರಗಳಲ್ಲಿ ತರಬೇತಿ ನೀಡಿ ಉದ್ಯೋಗ ದೊರಕುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಅಕ್ಟೋಬರ್ ನಲ್ಲಿ ನಡೆಯಬಹುದಾಗ ಬಜೆಟ್ ನಲ್ಲಿ ಈ ಕಾರ್ಯಕ್ರಮಗಳ ಕುರಿತ ಪ್ರಸ್ತಾವನೆಯನ್ನು ಮಂಡಿಸಲು ಪೂರಕವಾಗಿ ಕಾರ್ಯಕ್ರಮಗಳ ರೂಪರೇಷೆಗಳನ್ನು ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಉಪಮುಖ್ಯಮಂತ್ರಿ ಸ್ಥಾನ: ಕೃತಜ್ಞತೆ
ಬೆಂಗಳೂರು. ಆ.29: ಹಿರಿತನ, ಅನುಭವವನ್ನು ಪರಿಗಣಿಸಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ತಮಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.
ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಗೃಹ ಸಚಿವರು ಹಾಗು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷರಾದ ಶ್ರೀ ಅಮಿತ್ ಷಾ, ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶ್ರೀ ಸದಾನಂದ ಗೌಡ ಅವರಿಗೆ ಕೃತಜ್ಞತೆಗಳನ್ನು ಸಲ್ಲುಸುವುದಾಗಿ ತಿಳಿಸಿದ ಅವರು, ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಬದ್ದರಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. ಕಳೆದ 25 ವರ್ಷಗಳಿಂದ ತಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿ, ಮನೆಯ ಮಗನಾಗಿ ಬೆಳೆಸಿದ ಮುದೋಳ್ ಕ್ಷೇತ್ರ ಹಾಗು ಬಾಗಲಕೋಟೆ ಜಿಲ್ಲೆಯ ಜನತೆಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.