Tuesday, 16th April 2024
 
Advertise With Us | Contact Us

ರೈತರ ಬೆಳೆ ಸಾಲ ಸಂಪೂರ್ಣ ಮನ್ನಾದತ್ತ ಸರ್ಕಾರದ ಒಲವು: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಮೇ 30 ( ಕರ್ನಾಟಕ ವಾರ್ತೆ ):
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೂ ಸೇರಿದಂತೆ ಸಹಕಾರಿ ಬ್ಯಾಂಕ್‍ಗಳು, ವಾಣಿಜ್ಯ ಮತ್ತು ಷೆಡ್ಯೂಲ್ಡ್ ಬ್ಯಾಂಕ್‍ಗಳೂ ಒಳಗೊಂಡಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ 2009 ರ ಏಪ್ರಿಲ್ 1 ರಿಂದ 2017 ರ ಡಿಸೆಂಬರ್ 31 ರ ಅವಧಿಯಲ್ಲಿ ರಾಜ್ಯದ ರೈತರು ಪಡೆದು ಇನ್ನೂ ತೀರಿಸಲಾಗದೆ ಬಾಕಿ ಉಳಿಸಿಕೊಂಡಿರುವ ಬೆಳೆ ಸಾಲವನ್ನುಸಂಪೂರ್ಣವಾಗಿ ಮನ್ನಾ ಮಾಡಲು ಒಲವು ತೋರುತ್ತಿರುವ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಇಲ್ಲಿ ಇಂದು ಪ್ರಕಟಿಸಿದರು.

ರೈತರ ಬೆಳೆ ಸಾಲಮನ್ನಾ, ರೈತರ ಆತ್ಮಹತ್ಯೆ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳ ಪ್ರಾರಂಭಕ್ಕೆ ಪೂರಕ ವಾತಾವರಣ ಕಲ್ಪಿಸುವ ಕುರಿತಂತೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆಗಳು ಹಾಗೂ ಪ್ರಗತಿಪರ ರೈತರ ಜೊತೆ ನಡೆದ ಮೂರು ತಾಸುಗಳ ಸುದೀರ್ಘ ಸಮಾಲೋಚನಾ ಸಭೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ ಕುಮಾರಸ್ವಾಮಿ ಅವರು ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಇನ್ನು ಹತ್ತು ಅಥವಾ ಹದಿನೈದು ದಿನಗಳೊಳಗೆ ಸರ್ಕಾರಿ ಆದೇಶವನ್ನು ಹೊರಡಿಸಿ, ಋಣಮುಕ್ತ ಪತ್ರವನ್ನು ರೈತರ ಮನೆ ಬಾಗಿಲಿಗೇ ತಲುಪಿಸುವ ಭರವಸೆ ನೀಡಿದರು.

ಸಾಲವನ್ನು ಎಂದು ಪಡೆಯಲಾಗಿದೆ ? ಯಾವ ಉದ್ದೇಶಕ್ಕೆ ಪಡೆಯಲಾಗಿದೆ ? ಎಷ್ಟು ಮೊತ್ತದ ಸಾಲ ಪಡೆಯಲಾಗಿದೆ ? ಎಂಬ ಮಾಹಿತಿಯನ್ನು ಜಿಲ್ಲಾ ನೋಡಲ್ ಅಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳಿಗೆ ರೈತರು ಕೂಡಲೇ ಒದಗಿಸಬೇಕು. ಇನ್ನೆರಡು ದಿನಗಳೊಳಗೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಉನ್ನತಾಧಿಕಾರಿಗಳ ಸಭೆಯನ್ನು ಆಯೋಜಿಸಿ ಅವರಿಂದಲೂ ರೈತರು ಎಷ್ಟು ವಿಧಗಳ ಸಾಲ ಪಡೆದಿದ್ದಾರೆ ? ಎಷ್ಟು ಮೊತ್ತದ ಸಾಲ ಪಡೆದಿದ್ದಾರೆ ಎಂಬ ವಿವರಗಳನ್ನೂ ಸರ್ಕಾರವು ಕಲೆ ಹಾಕಲಿದೆ. ಬಡ್ಡಿಯ ಭಾಗವನ್ನು ಮನ್ನಾ ಮಾಡಲು ಸಾಧ್ಯವೇ ? ಒಂದೇ ಬಾರಿಯ ಒಪ್ಪಂದ ( ಒನ್ ಟೈಮ್ ಸೆಟಲ್ಮೆಂಟ್ ) ಕ್ಕೆ ಯಾವುದಾದರೂ ರಿಯಾಯಿತಿ ಅಥವಾ ವಿನಾಯಿತಿ ಉಂಟೇ ? ಎಂಬ ಅಂಶಗಳ ಕುರಿತು ಬ್ಯಾಂಕ್‍ಗಳ ಅಭಿಪ್ರಾಯವನ್ನು ಪಡೆಯಲಾಗುವುದು ಅವರು ಸಭೆಗೆ ತಿಳಿಸಿದರು.

ರಾಜ್ಯದ ಆಯವ್ಯಯದ ಮೊತ್ತ ಎರಡು ಲಕ್ಷ ಕೋಟಿ ರೂ ಇದೆ. ಆರೋಗ್ಯ, ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ, ವಿಶೇಷವಾಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಎಲ್ಲಾ ಯೋಜನೆಗಳೂ ಹಾಗೂ ಕಾರ್ಯಕ್ರಮಗಳನ್ನೂ ಆಯವ್ಯಯದ ಈ ಮಿತಿಯಲ್ಲಿಯೇ ಅನುಷ್ಠಾನಗೊಳಿಸಬೇಕಾಗಿದೆ. ರೈತರು ಪಡೆದ ವಿವಿಧ ಸಾಲಗಳ ಮೊತ್ತ 1.14 ಲಕ್ಷ ಕೋಟಿ ರೂ ಆಗಿದೆ. ಆದಕಾರಣ, ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಕೆಲವು ಮಾನದಂಡಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ ಪ್ರಥಮಾಧ್ಯತೆ ಯಾರಿಗೆ ನೀಡಬೇಕು ? ಪರಮಾಧ್ಯತೆ ಯಾವ ವರ್ಗಕ್ಕೆ ಕೊಡಬೇಕು ? ಕೃಷಿ ಸಾಲಕ್ಕೋ ? ಕೃಷಿ ಸಂಬಂಧೀ ಚಟುವಟಿಕೆಗಳಿಗೆ ಪಡೆದ ಸಾಲಕ್ಕೋ ? ಎಂಬುದನ್ನು ಸರ್ಕಾರ ನಿರ್ಧರಿಸಬೇಕಾಗುತ್ತದೆ. ಟ್ರ್ಯಾಕ್ಟರ್, ಟಿಲ್ಲರ್, ಅಷ್ಟೇ ಏಕೆ ? ಕಾರು ಖರೀದಿಸಲು ಅಥವಾ ಮಕ್ಕಳ ಮದುವೆ ಮಾಡಲು ಪಡೆದ ಸಾಲವನ್ನು ಮನ್ನಾ ಮಾಡುವುದು ಸಾಧುವೇ ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಉಳ್ಳವರ ಸಾಲ ಮನ್ನಾ ಬೇಡ !
ಸಣ್ಣ ಮತ್ತು ಅತಿ ಸಣ್ಣ ರೈತರು ಪಡೆದ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಮನ್ನಾಕ್ಕೆ ಆಧ್ಯತೆ ನೀಡಲಾಗುವುದು. ಆದರೆ, ಮೂರು ಲಕ್ಷ ರೂ ಗಳಿಗೂ ಹೆಚ್ಚು ಆದಾಯ ಗಳಿಕೆ ಇರುವ ಸಹಕಾರಿ ಸಂಸ್ಥೆಗಳಲ್ಲಿನ ಪದಾಧಿಕಾರಿಗಳು, ನೂರಾರು ಎಕರೆ ಕಾಫಿ ಪ್ಲಾಂಟೇಷನ್, ಟೀ ಪ್ಲಾಂಟೇಷನ್, ಸಾವಿರಾರು ಎಕರೆ ಕೃಷಿ ಭೂಮಿ ಹೊಂದಿರುವ ರೈತರ ಸಾಲವನ್ನೂ ಮೊದಲನೇ ಹಂತದಲ್ಲಿಯೇ ಮನ್ನಾ ಮಾಡಬೇಕೇ ? ಕೃಷಿಯ ಹೆಸರಿನಲ್ಲಿ ಕೃಷಿ ಪರಿಕರಗಳು ಮತ್ತು ಕೃಷಿ ಉಪಕರಣಗಳು ಮಾರಾಟಗಾರರು ಹಾಗೂ ಬೀಜ ಮತ್ತು ಗೊಬ್ಬರ ವ್ಯಾಪಾರಿಗಳು ಪಡೆದ ಸಾಲವನ್ನು ಮನ್ನಾ ಮಾಡುವ ಅವಶ್ಯಕತೆ ಇದೆಯೇ ? ಕೃಷಿ ಚಟುವಟಕೆಗಳ ಉದ್ದೇಶದಿಂದಲೇ ಮಂತ್ರಿಗಳು, ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ಇಂತಹ ಉಳ್ಳವರು ಪಡೆದ ಸಾಲವನ್ನು ಮನ್ನಾ ಮಾಡಬೇಕೇ ? ಎಂಬ ಮುಖ್ಯಮಂತ್ರಿಯವರ ಪ್ರಶ್ನೆಗೆ ನೆರೆದ ರೈತರು ಬೇಡಾ ಎಂದು ಗಟ್ಟಿಧ್ವನಿಯಲ್ಲಿ ಉತ್ತರಿಸಿದ್ದು ಗಮನಾರ್ಹವಾಗಿತ್ತು.

ಕಾಂಗ್ರೆಸ್ ವಿರೋಧ ಇಲ್ಲ
ರಾಜ್ಯದ ರೈತರ ಬೆಳೆ ಸಾಲ ಮನ್ನಾಕ್ಕೆ ಕಾಂಗ್ರೆಸ್ ಪಕ್ಷದ ವಿರೋಧವಿಲ್ಲ, ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೆಜ್ಜೆ ಇಡಬೇಕಾಗುತ್ತದೆ. ರೈತಪರ ಕಳಕಳಿ ಮತ್ತು ಕಾಳಜಿ ಹೊಂದಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸನ್ನಿಹಿತದಲ್ಲಿಯೇ ಭೇಟಿಯಾಗಿ, ಅವರ ಅಮೂಲ್ಯ ಅಭಿಪ್ರಾಯವನ್ನೂ ಪಡೆದು ಸಾಲಮನ್ನಾ ಮಾಡುವತ್ತ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ಶೀಘ್ರದಲ್ಲೇ ಹೊಸ ಯೋಜನೆಗಳು
ಸದಾ ಮಳೆಯನ್ನೇ ಅವಲಂಭಿಸುವ ರೈತ ನೀರು ಲಭ್ಯತೆಯನ್ನು ಆಧರಿಸಿ ಬೆಳೆ ಬೆಳೆಯಲು ಮುಂದಾಗಬೇಕು. ಅತೀವೃಷ್ಠಿಯಲ್ಲಿ ಬೆಳೆ ಹಾನಿ, ಅನಾವೃಷ್ಠಿಯಲ್ಲೂ ಬೆಳೆ ನಷ್ಟ, ಸಮವೃಷ್ಠಿಯಲ್ಲೂ ಬೆಳೆದ ಬೆಳೆಗೆ ದೊರೆಯದ ನ್ಯಾಯಯುತ ಬೆಲೆ ಇದು ರೈತನ ಪರಿಸ್ಥಿತಿಯಾಗಿದೆ. ಆದಕಾರಣ, ರೈತನ ಬಾಳಿನಲ್ಲಿ ಬೆಳಕು ತಂದು ರೈತನ ಬದುಕಿನಲ್ಲಿ ಸಮಷ್ಠಿ ತರಲು ತಮ್ಮ ಸರ್ಕಾರ ಶೀಘ್ರದಲ್ಲಿಯೇ ಹೊಸ ಯೋಜನೆಗಳನ್ನು ರೂಪಿಸಲಿದೆ. ಅನಿಶ್ಚಿತ ವಲಯವನ್ನು ನಿಶ್ಚಿತ ಆದಾಯ ತರುವ ವಲಯವನ್ನಾಗಿಸಲಿದೆ ಎಂಬ ಅಂಶವನ್ನು ಮುಖ್ಯಮಂತ್ರಿ ಬಹಿರಂಗಗೊಳಿಸಿದರು.

ರೈತರಿಗೆ ಸಲಹೆ-ಮನವಿ
ರಾಜ್ಯದ ರೈತರು ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂಬುದು ತಮ್ಮ ಬಯಕೆ. ನೀರು ಲಭ್ಯತೆಯನ್ನು ಆಧರಿಸಿ ಯಾವ ಋತುಮಾನಕ್ಕೆ ಯಾವ ಬೆಳೆ ಬೆಳೆಯಬಹುದು ? ಎಂಬುದರ ಕುರಿತು ಸರ್ಕಾರದ ಅಧಿಕಾರಿಗಳು ರೈತರ ಜಮೀನಿಗೇ ಬಂದು ಸಲಹೆ ನೀಡುತ್ತಾರೆ. ಬೆಳೆ ಬೆಳೆಯುವ ಮುನ್ನವೇ ತಮಗೆ ದೊರೆಯುವ ನ್ಯಾಯಯುತ ಬೆಲೆಯ ಬಗ್ಗೆ ಪೂರ್ವ ಮಾಹಿತಿ ಪಡೆದು ರೈತರು ನಿಶ್ಚಿಂತರಾಗಿರಬೇಕು ಎಂಬ ಸದಾಶಯವನ್ನು ಸಾಕಾರಗೊಳಿಸುವ ಹೆಬ್ಬಯಕೆ ತಮ್ಮದಾಗಿದೆ ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಮಾದರಿ ಹಾಗೂ ಪ್ರಾಯೋಗಿಕ ಯೋಜನೆಯನ್ನು ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಜಾರಿಗೆ ತರಲು ಯೋಜಿಸಿದ್ದೇನೆ ಆತಂಕದ ದಿನಗಳು ಇನ್ನಿಲ್ಲ. ನಮ್ಮದು ಧ್ವನಿ ಇಲ್ಲದ ರೈತರಿಗೆ ಧ್ವನಿಯಾಗಿರುವ ಸರ್ಕಾರ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮ್ಮ ಸರ್ಕಾರ ತಮ್ಮ ಜೊತೆಗಿದೆ. ಸರ್ಕಾರಕ್ಕೆ ತಮ್ಮ ಸಹಕಾರ ಇರಲಿ ಎಂದು ಕುಮಾರಸ್ವಾಮಿ ಅವರು ರೈತರಲ್ಲಿ ಮನವಿ ಮಾಡಿದರು.

ಯಶಸ್ವಿನಿ ಯೋಜನೆ ಮುಂದರಿಕೆ
ಮೇ 31 ರಂದು ಅಂತ್ಯಗೊಳ್ಳುವ ಯಶಸ್ವಿನಿ ವಿಮಾ ಯೋಜನೆಯನ್ನು ಮುಂದುವರೆಸಬೇಕೇಂದು ಎಂಬ ರೈತರ ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ ಹಿತದೃಷ್ಠಿಯಿಂದ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರೈತರ ಹರ್ಷೋದ್ಗಾರಗಳ ನಡುವೆ ಪ್ರಕಟಿಸಿದರು.

ಪ್ರತಿಹಳ್ಳಿಗೂ ಕೊಳವೆ ಮೂಲಕ ನೀರು !
ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗೂ ಕೊಳವೆ ಮೂಲಕ ಶುದ್ಧ ನೀರು ಒದಗಿಸುವ ಕನಸು ನಮ್ಮದಾಗಿದೆ. ಜಲಮೂಲಗಳ ಶೋಧನೆಯ ಜೊತೆಗೆ ಈ ಯೋಜನೆಯ ಅನುಷ್ಠಾನಕ್ಕೆ ನಲವತ್ತು ಸಾವಿರ ಕೋಟಿ ರೂ ಅಗತ್ಯವಿದೆ ಎಂದು ಪ್ರಾಥಮಿಕ ಅಂದಾಜುಗಳು ತಿಳಿಸಿವೆ. ಬಡ್ಡಿ-ರಹಿತ ಸಾಲ ದೊರೆತಲ್ಲಿ ತಮ್ಮ ಕನಸಿನ ಯೋಜನೆಯ ಅನುಷ್ಠಾನ ಮತ್ತಷ್ಟು ಸುಗಮವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಈ ಮುನ್ನ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಮಾತನಾಡಿ ಅರವತ್ತರ ದಶಕದಲ್ಲಿ ಭಾರತದಲ್ಲಿ ಅನ್ನವಿಲ್ಲದೆ ಸಾಯುತ್ತಿದ್ದರು. ಆದರೆ, ಎಂಭತ್ತರ ದಶಕದ ವೇಳೆಗೆ ತನ್ನ ದುಡಿಮೆಯಿಂದ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಎಲ್ಲರಿಗೂ ತಿನ್ನಲು ಅನ್ನ ಕೊಟ್ಟ ಅನ್ನದಾತನ ಕೊಡುಗೆಯನ್ನು ನಾವು ಎಂದೂ ಮರೆಯುವಂತಿಲ್ಲ ಸಾಲಮನ್ನಾಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಅಂದಿನ ಪ್ರಧಾನ ಮಂತ್ರಿ ಡಾ ಮನಮೋಹನ್ ಸಿಂಗ್ ಅವರು 72,000 ಕೋಟಿ ರೂ ಬೆಳೆ ಸಾಲ ಮನ್ನಾ ಮಾಡಿದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಸಹಕಾರಿ ಕ್ಷೇತ್ರದಲ್ಲಿನ 30,000 ರೂ ವರೆಗಿನ 8165 ಕೋಟಿ ರೂ ಮೊತ್ತದ ರೈತರ ಬೆಳೆ ಸಾಲ ಮನ್ನಾ ಮಾಡಿತ್ತು ಎಂಬುದನ್ನು ಸಭೆಯ ಗಮನಕ್ಕೆ ತಂದರು. ಇಂತಹ ವಿಷಯಗಳ ಕುರಿತು ತೀರ್ಮಾನ ಕೈಗೊಳ್ಳುವ ಮುನ್ನ ತಜ್ಞರ ಅಭಿಪ್ರಾಯ ಪಡೆಯುವುದು ಸೂಕ್ತ ಎಂದರು.

ರಾಜ್ಯ ವಿಧಾನ ಸಭೆಯಲ್ಲಿನ ಭಾರತೀಯ ಜನತಾ ಪಕ್ಷದ ಉಪ ನಾಯಕ ಗೋವಿಂದ ಎಂ ಕಾರಜೋಳ ಅವರು ಪೂರ್ಣ ಪ್ರಮಾಣದ ಬೆಳೆ ಸಾಲಮನ್ನಾದ ಪ್ರಸ್ತಾವನೆಯನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಇದು ತಮ್ಮ ಪಕ್ಷದ ನಿಲುವೂ ಕೂಡಾ ಎಂದು ಸ್ಪಷ್ಟಪಡಿಸಿದರು.

ಸಾಲಮನ್ನಾಕ್ಕೆ ಒಕ್ಕೊರಲ ಧ್ವನಿ
ಸಾಲಮನ್ನಾಕ್ಕೆ ಕಿಕ್ಕಿರಿದ ಸಭಾಂಗಣದಲ್ಲಿ ಒಕ್ಕೊರಲ ಧ್ವನಿ ಮೊಳಗಿತ್ತಾದರೂ ತಮ್ಮ ಅಭಿಪ್ರಾಯವನ್ನು ಮಂಡಿಸಿದ ಹಲವು ರೈತ ಮುಖಂಡರು ಸಂಪೂರ್ಣ ಸಾಲ ಮನ್ನಾ ರಾಜ್ಯ ಸರ್ಕಾರಕ್ಕೆ ಹೊರೆಯಾಗುತ್ತದೆ. ಕೇಂದ್ರ ಸರ್ಕಾರದ ನೆರವನ್ನೂ ಪಡೆಯಬೇಕು ಎಂದು ತಮ್ಮ ಮನದಾಳದ ಮಾತುಗಳಲ್ಲಿ ಸಂಪನ್ಮೂಲ ಕ್ರೋಢೀಕರಣ ಕುರಿತಂತೆ ಮುಖ್ಯಮಂತ್ರಿಯವರ ಕರ್ತವ್ಯ, ಜವಾಬ್ದಾರಿ ಹಾಗೂ ಹೊಣೆಗಾರಿಕೆಯ ದೃಷ್ಠಿಯನ್ನು ಗಮನದಲ್ಲಿರಿಸಿಕೊಂಡು ಸಲಹೆಗಳನ್ನು ನೀಡಿದ್ದು ಸಭೆಯಲ್ಲಿನ ವಿಶೇಷತೆಯಾಗಿತ್ತು.

ರೈತರು ತಮ್ಮ ಭೂಮಿ ಹಾಗೂ ಆಭರಣಗಳನ್ನು ಒತ್ತೆ ಇಟ್ಟು ಖಾಸಗಿ ಲೇವಾದೇವಿಗಾರಿಂದ ಪಡೆದ ಸಾಲವನ್ನೂ ಮನ್ನಾ ಮಾಡಬೇಕೆಂದು ಕೆಲವರು ಆಗ್ರಹಿಸಿದರು. ರೈತರ ಬಾಳು ಬೆಳಗಿಸುವ ಡಾ ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಎಂದು ಮತ್ತೆ ಕೆಲವರು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ, ಅಪರ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಂ ಲಕ್ಷ್ಮೀನಾರಾಯಣ ಅವರೂ ಸೇರಿದಂತೆ ಹಿರಿಯ ಅಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಅವರೂ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ರೈತರು ಸಭೆಯಲ್ಲಿ ಹಾಜರಿದ್ದರು.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085