ಬೆಂಗಳೂರು, 15 ಸೆಪ್ಟೆಂಬರ್ 2019
ಸಹಕಾರಿ ಬ್ಯಾಂಕ್‍ಗಳು ಶೆಡ್ಯೂಲ್ಡ್ ಮತ್ತು ರಾಷ್ಟ್ರೀಯ ಬ್ಯಾಂಕ್‍ಗಳಿಗಿಂತ ಜನರಿಗೆ ಹತ್ತಿರವಿದ್ದು ಉತ್ತಮ ಕೆಲಸ ಮಾಡುತ್ತಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಪಾದಿಸಿದರು.
ನಗರದ ರಾಜಾಜಿನಗರದಲ್ಲಿರುವ ಶ್ರೀ ಶಂಕರ ಸೇವಾ ಸಮಿತಿಯಲ್ಲಿ ನಡೆದ ಬ್ರಾಹ್ಮೀ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತದ ರಜತ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಸಹಕಾರಿ ಬ್ಯಾಂಕ್‍ಗಳು ಮತ್ತು ಸಹಕಾರಿ ಸೊಸೈಟಿಗಳು ಗ್ರಾಹಕರೊಂದಿಗೆ ನಿಜವಾದ ಆತ್ಮೀಯತೆ ಹೊಂದಿವೆ, ಈ ಬ್ಯಾಂಕ್‍ಗಳು ಬದ್ಧತೆ ಮತ್ತು ಉತ್ತರದಾಯಿತ್ವ ಹೊಂದಿವೆ ಎಂದು ನುಡಿದರು.
ಇಂದಿನ ದಿನಗಳಲ್ಲಿ ಸಾಲ ಪಡೆದು ಓಡಿಹೋಗುವವರ ಸಂಖ್ಯೆಯೇ ಹೆಚ್ಚಿರುವಾಗ ಬ್ರಾಹ್ಮಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿಯಮಿತದಲ್ಲಿ 38 ಕೋಟಿ ರೂಪಾಯಿ ಠೇವಣಿ ಇದ್ದು, ಈ ಬ್ಯಾಂಕ್‍ನಲ್ಲಿ ಶೇ.98ರಷ್ಟು ಮರುಪಾವತಿ ಇದೆ ಮತ್ತು 70 ಲಕ್ಷ ರೂ. ಲಾಭಗಳಿಸಿರುವುದು ಸಂತಸಕರ ಸಂಗತಿ ಎಂದು ಹೇಳಿದರಲ್ಲದೆ, ಇದೊಂದು ಪರಿವಾರ ಇದ್ದಂತೆ ರಜತ ಮಹೋತ್ಸವ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಸದಸ್ಯರನ್ನೂ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಮೋಸಹೋಗುವವರು ಬೆಂಗಳೂರಿನಲ್ಲೇ ಹೆಚ್ಚು!:
ಬೆಂಗಳೂರಿನಲ್ಲಿ ಆಗುವಷ್ಟು ಆರ್ಥಿಕ ಅಪರಾಧ ಇನ್ನೆಲ್ಲೂ ಆಗುವುದಿಲ್ಲ, ಇದಕ್ಕೆ ಬ್ಯಾಂಕ್‍ಗಳ ಆಡಳಿತ ಮಂಡಳಿ ಮಾತ್ರ ಕಾರಣವಲ್ಲ, ಬಡ್ಡಿಯ ಆಸೆಗೆ ಬಿದ್ದು, ಹಣ ಹೂಡಿಕೆ ಮಾಡುವುದು ತಪ್ಪು ಎಂದು ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಜನರನ್ನು ಚೆನ್ನಾಗಿ ಮಾತನಾಡಿ ಮೋಡಿ ಮಾಡಬಹುದು ಎಂಬುದು ವಂಚಕರಿಗೆ ಗೊತ್ತಿದೆ ಎಂದು ಹೇಳಿದ ಅವರು, ಇಂತಹ ಸಂದರ್ಭದಲ್ಲೂ ಬ್ರಾಹ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 25 ವರ್ಷಗಳಿಂದ ಯಶಸ್ವಿಯಾಗಿ ಮುಂದುವರೆದಿರುವುದು ಆಡಳಿತ ಮಂಡಳಿ ಮತ್ತು ಸದಸ್ಯರ ಬದ್ಧತೆ ತೋರಿಸುತ್ತಿದೆ. ಮುಂದಿನ 25 ವರ್ಷಗಳೂ ಸಹ ಬ್ಯಾಂಕಿಗೆ ಸವಾಲಿನ ಹಾದಿಯಾಗಿರಲಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಬಹಳಷ್ಟು ಆರ್ಥಿಕ ಸಂಸ್ಥೆಗಳಿವೆ, ಇವುಗಳ ಪೈಕಿ ಬ್ರಾಹ್ಮಿ ಯಶಸ್ವಿಯಾಗಿ ಮುನ್ನಡೆದಿರುವುದು ಬ್ಯಾಂಕಿನ ಆಡಳಿತ ಮಂಡಳಿ ಬದ್ಧತೆ ಮತ್ತು ಸೇವಾ ಮನೋಭಾವನದಿಂದ ಸಾಧ್ಯವಾಗಿದೆ ಎಂದರಲ್ಲದೆ, ಬ್ಯಾಂಕ್‍ಗಳು ನಿಮ್ಮ ಹಣ ಮಾತ್ರವಲ್ಲ, ನಿಮ್ಮ ಕನಸು, ನಿಮ್ಮ ಆಸೆ, ನಿಮ್ಮ ಭವಿಷ್ಯದ ರಕ್ಷಕನಾಗಿ ಕೆಲಸ ಮಾಡುತ್ತದೆ. ಹೀಗಾಗಿ ನಿಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಆಡಳಿತ ಮಂಡಳಿಗೆ ಪೋಲಿಸ್ ಆಯುಕ್ತರು ಕಿವಿಮಾತು ಹೇಳಿದರು.
ಮುಂದಿನ ದಿನಗಳಲ್ಲಿ ಹೆಚ್ಚಿನ ಸವಾಲಿನ ದಿನಗಳಾಗಿರಲಿವೆ, ವರ್ಷಾನುಗಟ್ಟಲೆ ಕಟ್ಟಿದ ಸಂಸ್ಥೆ ಅಥವಾ ವ್ಯಕ್ತಿತ್ವವನ್ನು ಕೆಲವೇ ಕ್ಷಣಗಳಲ್ಲಿ ಮಣ್ಣುಪಾಲು ಮಾಡುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಬ್ರಾಹ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉತ್ತಮ ತಂಡವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಗಾಧವಾಗಿ ಬೆಳೆಯಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಉದಯ್ ಗರುಡಾಚಾರ್, ನಗರದ ದಕ್ಷಿಣ ಭಾಗದಲ್ಲೂ ಶಾಖೆ ತೆರೆಯುವಂತೆ ಮನವಿ ಮಾಡಿ ಬ್ಯಾಂಕಿನ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಹಕಾರ ಸಂಘಗಳ ಅಪರ ನಿಬಂಧಕ ಕೆ.ಎಸ್. ನವೀನ್, ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ಡಿ. ನರಸಿಂಹಮೂರ್ತಿ, ಬ್ರಾಹ್ಮಿ ಸೊಸೈಟಿ ಅಧ್ಯಕ್ಷ ಆರ್. ಲಕ್ಷ್ಮಿಕಾಂತ್, ಉಪಾಧ್ಯಕ್ಷ ರಾಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಸೊಸೈಟಿ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಬ್ಯಾಂಕಿನ ಹಿರಿಯ ಸದಸ್ಯರನ್ನು ಮತ್ತು ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.