ಬೆಂಗಳೂರು, ಮೇ 28 ( ಕರ್ನಾಟಕ ವಾರ್ತೆ ):
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ವಾರಗಳ ಹಿಂದಷ್ಟೇ ಚುನಾಯಿತರಾಗಿದ್ದ ಶಾಸಕ ಸಿದ್ದು ಭೀಮಪ್ಪ ನ್ಯಾಮಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಭಾನುವಾರವಿಡೀ ನವದೆಹಲಿಯಲ್ಲಿ ಲವಲವಿಕೆಯಿಂದ ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದ ಸಿದ್ದು ನ್ಯಾಮಗೌಡ ಅವರು ಅದೇ ರಾತ್ರಿ ವಿಮಾನದಲ್ಲಿ ಗೋವಾಗೆ ಬಂದಿಳಿದು ತಮ್ಮ ತವರಿಗೆ ಪಯಣಿಸುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ ಎಂಬುದು ನನ್ನಲ್ಲಿ ಏಕ ಕಾಲಕ್ಕೆ ದುಃಖ ಮತ್ತು ನೋವನ್ನು ಉಂಟು ಮಾಡಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ರೈತರು ಎಂದರೆ ಶ್ರಮಜೀವಿಗಳು. ಅದರಲ್ಲೂ ಅವಿಭಜಿತ ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ರೈತರು ಮಹಾನ್ ಶ್ರಮಿಕರು, ಮಹಾನ್ ಸಾಧಕರು ಹಾಗೂ ಮಹಾನ್ ಸಾಹಸಿಗರು ಎಂಬುದನ್ನು ಇಡೀ ದೇಶಕ್ಕೇ ತೋರಿಸಿಕೊಟ್ಟವರು ಸಿದ್ದು ನ್ಯಾಮಗೌಡರು.
ಚಿಕ್ಕಪಡಸಲಗಿ ಮತ್ತು ಸುತ್ತಮುತ್ತಲಿನ 26,000 ಎಕರೆ ಭೂ ಪ್ರದೇಶಕ್ಕೆ ನೀರು ಒದಗಿಸುವುದರ ಜೊತೆಗೆ ಜಮಖಂಡಿ ಪಟ್ಟಣದ ಮೂರು ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ದೊರಕಿಸಿಕೊಟ್ಟ ಚಿಕ್ಕಪಡಸಲಗಿ ಬ್ಯಾರೇಜ್ ಇಡೀ ದೇಶದಲ್ಲೇ ದೊಡ್ಡ ಹೆಸರು ಮಾಡಿದೆ.
ಹೌದು ! ಜಮೀನಿನಲ್ಲಿ ಉಳುಮೆ ಮಾಡಿ ಬೆವರು ಹರಿಸುತ್ತಿದ್ದ ರೈತರು ತಾವು ಸಂಪಾದಿಸಿದ ಹಣದಲ್ಲಿ ದೇಣಿಗೆಯ ಮೂಲಕ ಮೂರು ದಶಕಗಳ ಹಿಂದೆಯೇ 50 ಲಕ್ಷ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಲು ಮುಂದಾದದ್ದು ಶ್ರಮಿಕರ ಸಾಧನೆ ಮಾತ್ರವಲ್ಲದೆ, ತಮ್ಮ ದೇಣಿಗೆಯ ಜೊತೆ ಜೊತೆಗೆ ಶ್ರಮದಾನವನ್ನೂ ಮಾಡಿ ಬ್ಯಾರೇಜ್ ನಿರ್ಮಿಸಿದ್ದು ಒಂದು ಸಾಹಸವೇ ಆಗಿತ್ತು. ರೈತರ ಈ ಶ್ರಮಕ್ಕೆ ಪ್ರೇರಣೆ ಹಾಗೂ ಸಾಹಸಕ್ಕೆ ಸ್ಪೂರ್ತಿ ನೀಡಿದ್ದು ಸಿದ್ದು ನ್ಯಾಮಗೌಡರು. ಅಂದು ರೈತರ ಶ್ರಮದಾನದ ನಾಯಕತ್ವ ವಹಿಸಿದ್ದ ಸಿದ್ದು ನ್ಯಾಮಗೌಡರು ಇಂದು ನಮ್ಮೊಡನೆ ಇಲ್ಲದಿರಬಹುದು. ಆದರೆ, ಸಾಕಾರಗೊಂಡಿರುವ ಅವರ ಕನಸಿನ ಕೂಸು ಮಾತ್ರ ಅಂದು, ಇಂದು ಮುಂದೂ ಅಷ್ಟೇ ಏಕೆ ? ಎಲ್ಲರಿಗೂ ಎಂದೆಂದೂ ಎದ್ದು ಕಾಣುತ್ತಲೇ ಇರುತ್ತದೆ.
ಅಂದು ಶ್ರಮದಾನ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದ ಸಿದ್ದು ನ್ಯಾಮಗೌಡ ಅವರು ರಾಜ್ಯ ರಾಜಕಾರಣಕ್ಕೆ ಬಳುವಳಿಯಾದರು. ಅಂದು ಕೃಷ್ಣೆಯ ಮೇಲಿನ ಚಿಕ್ಕಪಡಸಲಗಿ ಬ್ಯಾರೇಜ್‍ನ ಪ್ರಭಾವ ಎಷ್ಟಿತ್ತು ಎಂದರೆ 1991 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂದಿನ ಕಾಲದ ಪ್ರಭಾವಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಪರಾಭವಗೊಳಿಸಿ ಸಿದ್ದು ನ್ಯಾಮಗೌಡ ಅವರಿಗೆ ಲೋಕಸಭೆ ಪ್ರವೇಶಿಸಲು ಅನುವು ಮಾಡಿಕೊಟ್ಟಿತು ಸಿದ್ದು ನ್ಯಾಮೇಗೌಡ ಅವರು ನರಸಿಂಹರಾವ್ ಸಂಪುಟದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆಯ ರಾಜ್ಯ ಸಚಿವರಾಗುವ ಅವಕಾಶ ಪಡೆದರು. ಅಂತೆಯೇ, 2013 ರಲ್ಲಿ ನಡೆದ ಹದಿನಾಲ್ಕನೇ ವಿಧಾನ ಸಭೆಯಲ್ಲೂ ಸಿದ್ದು ನ್ಯಾಮೇಗೌಡ ಅವರು ಜಮಖಂಡಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಎಂಬುದು ಇದೀಗ ಇತಿಹಾಸ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಸಂದೇಶದಲ್ಲಿ ಸ್ಮರಿಸಿದ್ದಾರೆ.
ಸಿದ್ದು ನ್ಯಾಮಗೌಡ ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಸಿದ್ದು ನ್ಯಾಮಗೌಡ ಅವರ ಹಠಾತ್ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಅವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.