ಬೆಂಗಳೂರು, ಸೆಪ್ಟೆಂಬರ್ 10 (ಕರ್ನಾಟಕ ವಾರ್ತೆ):
ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟಿ ಬಿ ವಿ ರಾಧಾ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ಅಭಿನಿಯಿಸಿರುವ ಕೀರ್ತಿ ಮತ್ತು ಗೌರವ ಬಿ ವಿ ರಾಧಾ ಅವರದಾಗಿದೆ. ಅಲ್ಲದೆ, ಈ ಎಲ್ಲಾ ಭಾಷೆಗಳ ಚಿತ್ರರಂಗದಲ್ಲಿ ದಿಗ್ಗಜರಾಗಿ ಖ್ಯಾತಿ ಗಳಿಸಿದ ಎಲ್ಲಾ ನಾಯಕ ನಟರ ಜೊತೆಗೆ ನಟಿಸಿರುವ ಹೆಗ್ಗಳಿಕೆಯೂ ಬಿ ವಿ ರಾಧಾ ಅವರದಾಗಿದೆ.
ಬಿ ವಿ ರಾಧಾ ಅವರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸಿದ್ದಾರೆ. ರಾಧಾ ಅವರು ಅಭಿನಯಿಸಿರುವ ಚಿತ್ರಗಳಲ್ಲಿ ಬಹು ಪಾಲು ಚಿತ್ರಗಳು ಕನ್ನಡ ಚಿತ್ರಗಳೇ ಆಗಿವೆ. ನಾಯಕಿಯ ಪಾತ್ರಗಳಲ್ಲಿ ಮೋಹಕ ತಾರೆಯಾಗಿ ಮಿಂಚಿ ನಂತರ ಪೋಷಕ ನಟಿಯಾಗಿ ಪೋಷಕ ಪಾತ್ರಗಳಿಗೆ ಜೀವ ತುಂಬಿ ಪ್ರೇಕ್ಷಕರ ಗಮನ ಸೆಳೆದ ರಾಧಾ ಅವರು ಚಿತ್ರರಂಗದ ಪಯಣದಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.
ಬಿ ವಿ ರಾಧಾ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಈ ಹಿರಿಯ ಚೇತನದ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.