ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ):
ಮಾಜಿ ಸಚಿವ ರಾಮ್ಭಾವ್ ಪೋತದಾರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.
ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿ ಹಾಗೂ ನಂತರ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದ ರಾಮ್ಭಾವ್ ಪೋತದಾರ್ ಅವರು ಸರಳ ವ್ಯಕ್ತಿ. ಅಂತೆಯೇ, ಅವರದು ವಿರಳ ವ್ಯಕ್ತಿತ್ವ.
ಮಹಾರಾಷ್ಟ್ರದ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಾಟಕ ರಂಗದ ಗೀಳು. ರಾಜಕಾರಣದಲ್ಲಿ ಜಯ ಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಮಕೃಷ್ಣ ಹೆಗಡೆ ಅವರ ಸಾಂಗತ್ಯ. ವಣಕುದುರೆ ಶಾಂತಾರಾಮ್, ರಾಜ್ಕಪೂರ್, ದಿಲೀಪ್ ಕುಮಾರನಂತಹ ಹಿಂದಿ ಚಲನಚಿತ್ರ ರಂಗದ ದಿಗ್ಗಜರೊಂದಿಗೆ ಒಡನಾಟ. ಅದೇ ರೀತಿ ಜನಸಾಮಾನ್ಯರೊಂದಿಗೆ ಸಾಮಾನ್ಯನಾಗಿ ಬೆರೆತು ವಿಶೇಷ ಬಾಂಧವ್ಯ ಸಾಧಿಸಿದ್ದರು !
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾಜನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದ್ದ ರಾಮ್ ಭಾವ್ ಪೋತದಾರ್ ಅವರನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.
ರಾಮ್ ಭಾವ್ ಪೋತದಾರ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಈ ಹಿರಿಯ ಚೇತನದ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.