ಬೆಂಗಳೂರು, ಸೆಪ್ಟೆಂಬರ್ 8 ( ಕರ್ನಾಟಕ ವಾರ್ತೆ):
ಕನ್ನಡ ಚಲನಚಿತ್ರ ರಂಗದ ಸುಪ್ರಸಿದ್ಧ ನಟ ಆರ್. ಎನ್. ಸುದರ್ಶನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಭಾ ಸಾಗರ ಆರ್. ನಾಗೇಂದ್ರರಾಯರ ಪುತ್ರರಲ್ಲೊಬ್ಬರಾಗಿದ್ದ ಆರ್. ಎನ್. ಸುದರ್ಶನ್ ಅವರು ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಂತರ, ಹಿರಿತೆರೆಯಿಂದ ಹಿಂದಕ್ಕೆ ಸರಿದು ಕಿರಿತೆರೆಗೆ ಪ್ರವೇಶಿಸಿದ್ದರು. ಕೆಲ ದಿನಗಳ ಹಿಂದೆಯೂ ಕೂಡಾ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಅವರನ್ನು ಕಂಡ ನೆನಪು ಇನ್ನೂ ನನ್ನ ಮನದಲ್ಲಿ ಹಚ್ಚ ಹಸಿರಾಗಿದೆ.
ಸುದರ್ಶನ್ ಅವರು ಅಭಿನಯ ಮಾತ್ರವಲ್ಲ, ಗಾಯನ ಲೋಕದಲ್ಲೂ ವಿಶಿಷ್ಠ ಛಾಪು ಮೂಡಿಸಿದ್ದಾರೆ. ವಿಜಯನಗರದ ವೀರಪುತ್ರ ಚಿತ್ರದ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಅಮರ ಗೀತೆಯಲ್ಲಿನ ಸುದರ್ಶನ್ ಅವರ ಅಭಿನಯ ಸದಾ ನಮ್ಮ ಕಣ್ಣ ಮುಂದೆ ಸುಳಿದಾಡುವಂತಹುದು.
ಅಂತೆಯೇ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭ ಮಂಗಳ ಚಿತ್ರದಲ್ಲಿ ಸುದರ್ಶನ್ ಅವರು ಹಾಡಿರುವ ಹೂವೊಂದು ಬಳಿ ಬಂದು ತಾಗಿತು ಎನ್ನೆದೆಯಾ …. ಏನೆಂದು ಹೇಳಲಿ ಜೇನಂತ ಸಿಹಿ ನುಡಿಯಾ….. ಗೀತೆ ಸದಾ ಕಾಲ ನಮ್ಮ ಕಿವಿಯಲ್ಲಿ ಹರಿದಾಡುವಂತಹುದು ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.
ಸುದರ್ಶನ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಶ್ರೀಯುತರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಸುದರ್ಶನ್ ಅವರ ಅಗಲಿಕೆಯಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.