ಬೆಂಗಳೂರು, ಮೇ 17 ( ಕರ್ನಾಟಕ ವಾರ್ತೆ ):
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಇಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಬಿ ಎಸ್ ಯಡಿಯೂರಪ್ಪ ಅವರು ಕನ್ನಡ ಭಾಷೆಯಲ್ಲಿ, ದೇವರ ಹೆಸರಿನಲ್ಲಿ ಹಾಗೂ ರೈತರ ಹೆಸರಿನಲ್ಲಿ, ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಎಂದಿನಂತೆ ಶ್ವೇತ ವಸ್ತ್ರಧಾರಿಯಾಗಿದ್ದ ಯಡಿಯೂರಪ್ಪ ಅವರು ಪ್ರಮಾಣ ವಚನ ಸಂದರ್ಭದಲ್ಲಿ ಹಸಿರು ಶಾಲು ಹೊದ್ದಿದ್ದರು. ಆರು ನಿಮಿಷಗಳ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಯಡಿಯೂರಪ್ಪ ಅವರಿಗೆ ಅಧಿಕಾರಪದ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು.
ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಹೆಚ್ ಎನ್ ಅನಂತಕುಮಾರ್, ಭಾರತೀಯ ಜನತಾ ಪಕ್ಷದ ಮುಖಂಡರಾದ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಸೇರಿದಂತೆ ಹಲವು ಗಣ್ಯರು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕರಾದ ನೀಲಮಣಿ ಎನ್ ರಾಜು, ಮುಖ್ಯಮಂತಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರೂ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ಮುನ್ನ 2007 ರ ನವೆಂಬರ್ 12 ರಲ್ಲಿ ಪ್ರಪ್ರಥಮ ಬಾರಿಗೆ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ತದನಂತರ, 2008 ರ ಮೇ 30 ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದೀಗ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ.