Thursday, 18th July 2024
 
Advertise With Us | Contact Us

ದೇಶಭಕ್ತಿಯೇ ಸಮರ ವಿಜಯದ ಗುಟ್ಟು – ಲೇಖಕ ರವಿಕುಮಾರ್ ಅಯ್ಯರ್

ದೇಶಭಕ್ತಿಯೇ ಸಮರದಲ್ಲಿ ಗೆಲುವು ಸಾಧಿಸಲು ಮುಖ್ಯ ಅಂಶವಾಗಿದೆ. ಇಂತಹಾ ದೇಶಭಕ್ತಿಯನ್ನು ಪ್ರಚುರಪಡಿಸುವುದು ಇತಿಹಾಸ ಎಂದು ಖ್ಯಾತ ಲೇಖಕರಾದ ರವಿಕುಮಾರ್ ಅಯ್ಯರ್ ರವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಸಾಹಿತ್ಯ ಸಿಂಧು ಪ್ರಕಾಶನದ ಜಂಟಿ ಆಯೋಜನೆಯಲ್ಲಿ ನಡೆದ ‘ಬಿಚ್ಚುಗತ್ತಿ’ ಪುಸ್ತಕ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪುಸ್ತಕದ ಮೂಲಲೇಖಕರಾದ ರವಿಕುಮಾರ್ ರವರು, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವುದು ಕಷ್ಟಕರ. ಅದನ್ನೂ ಸುಲಲಿತವಾಗಿಸಿದ ಪ್ರದೀಪ್ ಮೈಸೂರುರವರಿಗೆ ಅಭಿನಂದನೆಗಳು ಸಲ್ಲಬೇಕು. ಇಸ್ರೇಲ್ ನ ಇತಿಹಾಸದಲ್ಲಿ ಹೈಫಾ ಯುದ್ಧ ಮಹತ್ತ್ವವನ್ನು ಪಡೆದಿದೆ. ಇದರಲ್ಲಿ ಭಾರತೀಯರ ಪಾತ್ರ ಬಹಳಿದೆ. ಇದನ್ನು ದಾಖಲಿಸುವ ಪ್ರಯತ್ನ ‘ಬಿಚ್ಚುಗತ್ತಿ’ ಕಿರುಹೊತ್ತಿಗೆ. ಭಾರತೀಯ ಇತಿಹಾಸದಲ್ಲಿಯೂ ವಿಶೇಷವಾಗಿ ರಾಷ್ಟ್ರೀಯತೆಯ ಭಾವಗಳನ್ನು ಪ್ರಚುರಪಡಿಸಿದ್ದು ಅಂದಿನ ಯುದ್ಧ‌. ಈ ಕಾರಣಕ್ಕಾಗಿ ಯಹೂದಿಗಳೇ ತಮ್ಮಲ್ಲಿ ಇಸ್ರೇಲ್ ನ ರಕ್ತವಿದ್ದರೂ ಹೃದಯದಲ್ಲಿ ಭಾರತವಿದೆ ಎಂದು ಹೇಳುವಂತೆ ಮಾಡಿರುವುದು ನಮ್ಮ ಇತಿಹಾಸದ ಹೆಮ್ಮೆ. ಹಾಗಾಗಿ ಒಂದರ್ಥದಲ್ಲಿ ಇದು ಪುಸ್ತಕ ರೂಪದ ಇತಿಹಾಸ ಕೆತ್ತನೆ ಎಂದೇ ಹೇಳಬಹುದು ಎಂದು ಅಭಿಪ್ರಾಯಪಟ್ಟರು.

ಖ್ಯಾತ ನಟ ಹಾಗೂ ರಂಗಕರ್ಮಿಯಾದ ಶ್ರೀ ಪ್ರಕಾಶ್ ಬೆಳವಾಡಿಯವರು ಮಾತನಾಡಿ, ಭಾರತೀಯ ಇತಿಹಾಸವನ್ನೇ ನಮಗೆ ಸರಿಯಾಗಿ ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಚರಿತ್ರೆ ಹಾಗೂ ಇತಿಹಾಸ ಬೇರೆಯದೇ ಸ್ವರೂಪ ಹೊಂದಿದ್ದು ಪಾಶ್ಚಾತ್ಯ ಕಣ್ಣುಗಳಿಂದ ಭಾರತೀಯ ಚರಿತ್ರೆಯನ್ನು ನೋಡುವ ರೀತಿ ನಮ್ಮ ಅಸ್ಮಿತೆಯನ್ನು ನಾಶಮಾಡುತ್ತಿದೆ. ಈ ದೃಷ್ಟಿಯಿಂದ ‘ಬಿಚ್ಚುಗತ್ತಿ’ ಕೃತಿಗೆ ಮಹತ್ತರ ಒತ್ತನ್ನು ನೀಡಬೇಕಿದೆ. ಈ ಕಿರುಹೊತ್ತಿಗೆ ಅರಿವು ಮೂಡಿಸುವ ಸಲುವಾಗಿ ಇರುವಂತದ್ದು. ಹಲವು ದೇಶಗಳಲ್ಲಿ ಕಥೆಗಳಿವೆ. ಆದರೆ ಕಥೆಗೆ ತಕ್ಕುದಾದ ಚರಿತ್ರೆ ರಚಿಸುವ ಕಾರ್ಯ ಭಾರತೀಯ ಸಂದರ್ಭದಲ್ಲಿ ವಿರಳ. ಅಂತಹುದರಲ್ಲಿ ಇತಿಹಾಸದ ಕೀಳರಿಮೆ ಮೂಡಿಸುವ ಸಾಹಿತ್ಯದ ಬದಲು ಹೆಮ್ಮೆ ಹುಟ್ಟಿಸುವ ದೃಷ್ಟಿಕೋನದ ಭಾಗ ‘ಬಿಚ್ಚುಗತ್ತಿ’ ಪುಸ್ತಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುಸ್ತಕದ ಅನುವಾದಕರಾದ ಪ್ರದೀಪ್ ಮೈಸೂರು, ತುಮಕೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥರಾದ ಸಿಬಂತಿ ಪದ್ಮನಾಭ, ಕಾಕುಂಜೆ ಕೇಶವ ಭಟ್, ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ ಇನ್ನಿತರ ಗಣ್ಯರು ಹಾಜರಿದ್ದರು.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085