ಬೆಂಗಳೂರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಅಡಿ ವ್ಯವಹರಿಸುವ ಎಲ್ಲಾ ಗ್ರಾಹಕರಿಗೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಗ್ರಾಹಕರ ವ್ಯವಹಾರದ ಭೌತಿಕ ಪರಿಶೀಲನೆ ನಡೆದ ಪಕ್ಷದಲ್ಲಿ ಇದರ ವಿನಾಯಿತಿ ದೊರಕಲಿದೆ ಎಂದು ಬಿಹಾರದ ಉಪಮುಖ್ಯಮಂತ್ರಿ ಹಾಗೂ ಜಿಎಸ್‍ಟಿ ಮಂಡಳಿಯ ಮುಖ್ಯಸ್ಥರಾದ ಶ್ರೀ ಸುಶೀಲ್‍ಕುಮಾರ್ ಮೋದಿ ತಿಳಿಸಿದರು.
ಅವರು ಹಿಂದೂ ಖಾಸಗಿ ಹೋಟೇಲ್‍ನಲ್ಲಿ ಜಿಎಸ್‍ಟಿಯ ಬೆಳವಣಿಗೆಗಳ ಕುರಿತು ಸಭೆಯ ನಂತರ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈಗಾಗಲೇ ಜಿಎಸ್‍ಟಿಯಡಿ ನೋಂದಿತ ಗ್ರಾಹಕರಿಗೆ ಸಹ ಮುಂದಿನ ಹಂತದಲ್ಲಿ ಆಧಾರ್ ಕಡ್ಡಾಯಗೊಳಿಸಲಾಗುವುದು. ಗ್ರಾಹಕರು ಆನ್‍ಲೈನ್ ಮೂಲಕ ಜಿಎಸ್‍ಟಿ ಹಣದ ಮರುಪಾವತಿಯನ್ನು ಮಾಡುವುದಕ್ಕೆ ಇದೇ ಸೆಪ್ಟೆಂಬರ್ 24 ಕ್ಕೆ ಗಡುವು ನೀಡಲಾಗಿದೆ. ಇದೀಗ ಕೇಂದ್ರ ಅಥವಾ ರಾಜ್ಯ ಯಾವುದಾದರೂ ಒಂದಕ್ಕೆ ಮರುಪಾವತಿಯನ್ನು ಮಾಡಬಹುದು. ಸದ್ಯ ರೂ. 93,416 ಕೋಟಿ ಮರುಪಾವತಿಯಾಗಬೇಕಿದ್ದು, ಅದರಲ್ಲಿ ಶೇ 74 ರಷ್ಟು ಮಾತ್ರ ಪಾವತಿಯಾಗಿದೆ. ಉಳಿಕೆ ಹಣವನ್ನು ಸಹ ಗ್ರಾಹಕರು ಶೀಘ್ರವೇ ಪಾವತಿಸಬೇಕೆಂದು ವಿನಂತಿಸಿದರು.
ತೆರಿಗೆ ಪಾವತಿಗಾರರಿಗೆ ಹೊಸ ಆದಾಯ ನೀತಿಯನ್ನು ಜನವರಿ 2020 ಕ್ಕೆ ಜಾರಿಗೊಳಿಸಲಾಗುವುದು. ಗ್ರಾಹಕರು ವಾರ್ಷಿಕ ಆದಾಯ ತೆರಿಗೆ ಪಾವತಿಯನ್ನು ಇದೇ ನವೆಂಬರ್ 30 ರೊಳಗೆ ಸಲ್ಲಿಸಬಹುದು. ಒಟ್ಟು 64,17,000 ಗ್ರಾಹಕರು ವಾರ್ಷಿಕ ತೆರಿಗೆಯಡಿ ಇದ್ದು, ಅದರಲ್ಲಿ ಕೇವಲ 21,35,000 ಗ್ರಾಹಕರು ಅಂದರೆ ಶೇ 33 ರಷ್ಟು ಮಾತ್ರ ವಾರ್ಷಿಕ ಆದಾಯವನ್ನು ಸಲ್ಲಿಕೆ ಮಾಡಿದ್ದಾರೆ. ಮುಂದುವರೆದ ದಿನಗಳಲ್ಲಿ ಇದನ್ನು ಇನ್ನಷ್ಟು ಸರಳೀಕರಣಗೊಳಿಸಲಾಗುವುದೆಂದರು.
ಈ ವರ್ಷದ ಜೂನ್, ಜುಲೈನಲ್ಲಿ ಯಾವ ಗ್ರಾಹಕರು ಆದಾಯವನ್ನು ನೋಂದಾಯಿಸಿರುವುದಿಲ್ಲವೋ ಅಂತವರ ಇ-ವೇ ಬಿಲ್‍ನ್ನು ರದ್ದುಗೊಳಿಸಲಾಗುವುದು. ಕರ್ನಾಟಕದಲ್ಲಿ 1,75,294 ಇ-ವೇ ಬಿಲ್ ಬಳಕೆದಾರರಲ್ಲಿ 35,033 ಗ್ರಾಹಕರು ಅನಧಿಕೃತವಾಗಿ ಬಿಲ್ ಬಳಸುತ್ತಿದ್ದು, ಅವುಗಳನ್ನು ಶೀಘ್ರದಲ್ಲಿ ರದ್ದುಗೊಳಿಸಲಾಗುವುದು. ಈ ಪ್ರಕ್ರಿಯೆಯನ್ನು ರಾಜ್ಯಾದದ್ಯಂತ ನಡೆಸಲಾಗುವುದು. 15ನೇ ಹಣಕಾಸು ಆಯೋಗದ ಸದಸ್ಯರು ಸಹ ಇನ್ನು ಮುಂದೆ ಜಿಎಸ್‍ಟಿ ಮಂಡಳಿಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಒಡಿಶಾ ರಾಜ್ಯದ ಹಣಕಾಸು ಹಾಗೂ ಅಬಕಾರಿ ಸಚಿವ ನಿರಂಜನ್ ಪೂಜಾರಿ ಉಪಸ್ಥಿತರಿದ್ದರು.