Wednesday, 24th April 2024
 
Advertise With Us | Contact Us

ಸದನದಲ್ಲಿ ಬಹುಮತ ಸಾಬೀತುಪಡಿಸುವ ಮುನ್ನವೇ ಮೂರು ದಿನಗಳ ಅವಧಿಯ ಭಾರತೀಯ ಜನತಾ ಪಕ್ಷದ ಸರ್ಕಾರ ಪತನ

ಬೆಂಗಳೂರು, ಮೇ 19 ( ಕರ್ನಾಟಕ ವಾರ್ತೆ ):
ಸದನದಲ್ಲಿ ಬಹುಮತ ಸಾಬೀತುಪಡಿಸುವ ಮುನ್ನವೇ, ತನಗೆ ಅಗತ್ಯವಿರುವ ಎಂಟು ಸದಸ್ಯರ ಬೆಂಬಲ ಪಡೆಯುವ ಬಗ್ಗೆ ವಿಶ್ವಾಸ ಕಳೆದುಕೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಸಲ್ಲಿಸಲು ಮುಂದಾದ ಹಿನ್ನೆಲೆಯಲ್ಲಿ, ಕೇವಲ ಮೂರು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಜನತಾ ಪಕ್ಷದ ಸರ್ಕಾರ ಪತನಗೊಂಡಿದೆ.

ರಾಜ್ಯದಲ್ಲಿ ಮೇ 12 ರಂದು ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿರಲಿ, ಸರಳ ಬಹುಮತವೂ ಬಾರದ ಹಿನ್ನೆಲೆಯಲ್ಲಿ, ಹದಿನೈದನೇ ವಿಧಾನ ಸಭೆಯಲ್ಲಿ 104 ಸ್ಥಾನಗಳನ್ನು ಗಳಿಸಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷವು ಸರ್ಕಾರ ರಚಿಸಲು ತನ್ನ ಹಕ್ಕು ಮಂಡಿಸಿದ್ದನ್ನು ಪರಿಗಣಿಸಿ ರಾಜ್ಯಪಾಲರು ಎಂದಿನ ಸಂಪ್ರದಾಯದಂತೆ ಅವಕಾಶ ಕಲ್ಪಿಸಿದರಾದರೂ, 38 ಸ್ಥಾನಗಳನ್ನು ಪಡೆದಿದ್ದ ಜಾತ್ಯಾತೀತ ಜನತಾ ದಳಕ್ಕೆ 78 ಸ್ಥಾನ ಗಳಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಪೂರ್ಣ ಪ್ರಮಾಣದ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಬೇಷರತ್ ಬೆಂಬಲ ಘೋಷಿಸಿದ ಕೂಡಲೇ ಅತ್ಯಂತ ಕ್ಷಿಪ್ರವಾಗಿ ಉಂಟಾದ ಚುನಾವಣೋತ್ತರ ಮೈತ್ರಿ ಮತ್ತು ಸಮೀಕರಣದ ಬೆಳವಣಿಗೆಗಳು ಹಾಗೂ ವಿದ್ಯಮಾನಗಳ ಹಿನ್ನೆಲೆಯಲ್ಲಿ ಒಂದೆಡೆ ಸರ್ಕಾರ ರಚಿಸಲು ಅವಕಾಶ ನೀಡಿದ ರಾಜ್ಯಪಾಲರ ಕ್ರಮ ಭಾರತ ಸರ್ವೋಚ್ಛ ನ್ಯಾಯಾಲಯದ ಅಂಗಳವನ್ನು ಪ್ರವೇಶಿಸಿ ನ್ಯಾಯಾಂಗ ಪರಿಶೀಲನೆಯ ಪರಿಧಿಗೊಳಪಟ್ಟಿತಲ್ಲದೆ ಮತ್ತೊಂದೆಡೆ ಅಧಿಕಾರದ ಗದ್ದುಗೆಗೇರಿದ ಭಾರತೀಯ ಜನತಾ ಪಕ್ಷಕ್ಕೆ ಅಗತ್ಯ ಬೆಂಬಲ ಪಡೆಯಲು ಸಾಧ್ಯವಾಗದೆ ಎಂಟು ಸದಸ್ಯರ ಸಂಖ್ಯಾಬಲದ ಕೊರತೆ ಉಂಟಾಗಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಅವಕಾಶವೇ ಇಲ್ಲದಂತಾದದ್ದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕಾದ ಅನಿವಾರ್ಯ ಹಂತಕ್ಕೆ ದೂಡಿತು.

ರಾಜ್ಯದಲ್ಲಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಅವರು ಮೂರೇ ದಿನಗಳಲ್ಲಿ ಅಧಿಕಾರದ ಗದ್ದುಗೆಯಿಂದ ದೂರವಾಗಿದ್ದು, ಅತ್ಯಲ್ಪ ಅವಧಿಯ ಮುಖ್ಯಮಂತ್ರಿ ಎಂದು ರಾಜ್ಯದಲ್ಲಿ ಈ ಹಿಂದೆ 2007 ರ ನವೆಂಬರ್ 12 ರಿಂದ 19 ರ ಅವಧಿಯಲ್ಲಿ ತಾವೇ ದಾಖಲಿಸಿದ್ದ ಏಳು ದಿನಗಳ ಅವಧಿಯ ತಮ್ಮದೇ ದಾಖಲೆಯನ್ನು ಮುರಿದು ಕೇವಲ ಮೂರು ದಿನಗಳ ಅತ್ಯಲ್ಪ ಅವಧಿಯ ಮುಖ್ಯಮಂತ್ರಿಯಾಗಿ ಹೊಸ ದಾಖಲೆ ಸೃಷ್ಠಿಸಿದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಬಹುಶಃ ಒಂದು ಶಾಶ್ವತ ದಾಖಲೆಯಾಗಿಯೇ ಉಳಿಯಲಿದೆ.

ಭಾರತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಶನಿವಾರವೇ ಪ್ರಾರಂಭವಾದ ಹದಿನೈದನೇ ವಿಧಾನ ಸಭೆ ಸಮಾವೇಶಗೊಂಡು ಶಾಸಕರಾಗಿ ಎಲ್ಲಾ 221 ಸದಸ್ಯರು ಪ್ರಮಾಣ ವಚನ ಸ್ವೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಕೂಡಲೇ ಈ ಸದನವು ತಮ್ಮಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತದೆ ಎಂಬ ವಿಶ್ವಾಸ ಮತಯಾಚನೆಯ ಪ್ರಸ್ತಾವವನ್ನು ಮಂಡಿಸುವ ಮುನ್ನ ಸದನವನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು ತಮ್ಮ ಜನಪರ ಹಾಗೂ ರೈತಪರ ಹೋರಾಟದ ದಿನಗಳನ್ನು ಸ್ಮರಿಸಿದರು.

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ತಾನು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯದೇ ನೊಂದು ಬೆಂದು ಅನ್ನದಾತ ಮಾಡಿಕೊಳ್ಳುತ್ತಿರುವ ಆತ್ಮಹತ್ಯೆಗಳನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೃಷಿ ಕ್ಷೇತ್ರಕ್ಕೆ ನೀರು ಒದಗಿಸಲು ಈವರೆಗೆ ಸಾಧ್ಯವಾಗಿಲ್ಲ. ಶುದ್ಧ ಕುಡಿಯುವ ನೀರು ದೊರಕಿಸಿಕೊಟ್ಟು ಜನಸಾಮಾನ್ಯರ ಹಾಹಾಕಾರ ತಣಿಸುವ ಕನಸೂ ಸಾಕಾರಗೊಂಡಿಲ್ಲ. ಇಂತಹ ಸನ್ನಿವೇಶದಲ್ಲಿ ಚುನಾವಣೆಗಳು ನಡೆದರೆ ವ್ಯವಸ್ಥೆಯ ಬಗ್ಗೆ ಸಹಜವಾಗಿಯೇ ಬೇಸತ್ತ ಜನರು ಯಾವುದೇ ಪಕ್ಷಕ್ಕೆ ತುಂಬು ಬೆಂಬಲ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಪರಿಸ್ಥಿತಿಯನ್ನು ವಿಶ್ಲೇಷಿಸಿದರು.

ಎರಡು ವರ್ಷಗಳ ಹಿಂದೆ – ಅಂದರೆ 2016 ರ ಏಪ್ರಿಲ್ 14 ರಂದು – ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ತಮ್ಮನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ ದಿನದಿಂದಲೂ ರಾಜ್ಯಾದ್ಯಂತ ಪ್ರವಾಸ ಮಾಡಿದ್ದನ್ನು ಸ್ಮರಿಸಿದ ಯಡಿಯೂರಪ್ಪ ಅವರು ಪಕ್ಷವು ಆಯೋಜಿಸಿದ್ದ ಪರಿವರ್ತನಾ ರ್ಯಾಲಿಗಳ ಸಂದರ್ಭದಲ್ಲಿ ತಮಗೆ ದೊರೆತ ಅಭೂತಪೂರ್ವ ಜನಬೆಂಬಲವನ್ನು ತಾವೆಂದೂ ಮರೆಯಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.

ಹದಿನಾಲ್ಕನೇ ವಿಧಾನ ಸಭೆಯಲ್ಲಿ ಕೇವಲ 44 ಸ್ಥಾನಗಳಿದ್ದ ತಮ್ಮ ಪಕ್ಷಕ್ಕೆ ರಾಜ್ಯ ವಿಧಾನ ಸಭೆಗೆ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ರಾಜ್ಯದ ಜನತೆಯ ಆಶೀರ್ವಾದದಿಂದ 104 ಸ್ಥಾನಗಳು ಲಭಿಸಿದ್ದವು. ಆದರೆ, ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ಪಕ್ಷಗಳು ತಮಗಿದ್ದ ಸಂಖ್ಯಾಬಲದಲ್ಲಿ ಕುಸಿತ ಕಂಡಿದ್ದವು. ಅಪ್ಪನಾಣೆಗೂ ಅವರು ಮುಖ್ಯಮಂತ್ರಿಯಾಗುವುದಿಲ್ಲ. ಅಪ್ಪನಾಣೆಗೂ ಇವರು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಆರೋಪ-ಪ್ರ್ಯತ್ಯಾರೋಪ ಮಾಡಿ, ಚುನಾವಣೆಗಳಲ್ಲಿ ಸೋಲನ್ನು ಕಂಡು ಜನರಿಂದ ತಿರಸ್ಕೃತರಾದವರು ಜನಾದೇಶಕ್ಕೆ ವಿರುದ್ಧವಾಗಿ ಇಂದು ಅಪವಿತ್ರ ಹಾಗೂ ಅವಕಾಶವಾದಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ತಮ್ಮ ಮಾತಿನಲ್ಲೇ ಯಡಿಯೂರಪ್ಪ ಅವರು ಕಟುಪ್ರಹಾರ ಮಾಡಿದರು.

ರಾಜ್ಯದ ರೈಲ್ವೇ ಯೋಜನೆಗಳಿಗೆ ಅನುದಾನ ಒದಗಿಸುವಲ್ಲಿ, ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ಹಣ ನಿಗದಿಪಡಿಸುವಲ್ಲಿ, ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಹಣಕಾಸು ನೆರವು ಕಲ್ಪಿಸುವಲ್ಲಿ ಕೇಂದ್ರ ಸರ್ಕಾರವು ಯಾವುದೇ ತಾರತಮ್ಯ ಮಾಡಿಲ್ಲ. ರಾಜ್ಯದಲ್ಲಿ ಪ್ರಕೃತಿ ಸಂಪತ್ತು, ಖನಿಜ ಸಂಪತ್ತು ಎಲ್ಲವೂ ಇದೆ. ಅಂತೆಯೇ ಪ್ರಾಮಾಣಿಕ ಕೈಗಳ ಕೊರತೆಯೂ ಇದೆ ಎಂದು ನೊಂದು ನುಡಿದರು.

ಸಾರ್ವತ್ರಿಕ ಬದುಕಿನಲ್ಲಿ ತಾವೆಂದೂ ಮರ್ಜಿ ರಾಜಕಾರಣ ಮಾಡಲಿಲ್ಲ. ಕೇವಲ ಇಬ್ಬರು ಸದಸ್ಯರಿದ್ದಾಗಲೂ ಸದನದಲ್ಲಿ ಬಡವರ ಪರ ಧ್ವನಿ ಮೊಳಗಿಸಿ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಜೀವನ ಸಾಗಿಸುತ್ತಿದ್ದವರಿಗೆ ಬದುಕುವ ಹಕ್ಕನ್ನು ದೊರಕಿಸಿಕೊಟ್ಟಿದ್ದೇನೆ. ಜೀತದಾಳು ಪದ್ಧತಿಯ ವಿರುದ್ಧ ಚಳುವಳಿಗಳನ್ನು ನಡೆಸಿ ಅವರಿಗೆ ಬದುಕನ್ನು ಕಟ್ಟಿಕೊಟ್ಟಿದ್ದೇನೆ. ಒಟ್ಟಾರೆ ಕೆಳಸ್ತರದ ಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಲು ಎಲ್ಲಾ ಹಂತಗಳಲ್ಲೂ ಹೋರಾಟ ನಡೆಸಿದ್ದೇನೆ ಎಂದು ಯಡಿಯೂರಪ್ಪ ಅವರು ತಮ್ಮ ಬದುಕಿನ ವಿವಿಧ ಮಜಲುಗಳನ್ನು ತೆರೆದಿಟ್ಟರು.

ಚುನಾವಣಾ ಪೂರ್ವದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆಯೇ, ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದ ಒಂದು ಲಕ್ಷ ರೂ ವರೆಗಿನ ಬೆಳೆ ಸಾಲ ಹಾಗೂ ಒಂದು ಲಕ್ಷ ರೂ ವರೆಗಿನ ನೇಕಾರರ ಸಾಲವನ್ನು ಮನ್ನಾ ಮಾಡಬೇಕೆಂಬ ಮಹದಾಸೆ ತಮ್ಮದಾಗಿತ್ತು. ಕೆಲವು ಯೋಜನೆಯನ್ನು ಅನುಷ್ಠಾನಕ್ಕೆ ತರದಿದ್ದರೂ ಪರವಾಗಿಲ್ಲ. ನೀರಾವರಿಗೆ ಆಧ್ಯತೆ ನೀಡಿ, ರಾಜ್ಯದಲ್ಲಿ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಒಂದೂವರೆ ಲಕ್ಷ ಕೋಟಿ ರೂ ಮೀಸಲಿರಿಸಿ ಕೃಷಿಕರ ಬಾಳು ಹಸನಾಗಿಸಬೇಕೆಂಬ ತಮ್ಮ ಕನಸು ನನಸಾಗಲಿಲ್ಲ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಐದು ಸಾವಿರ ಕೋಟಿ ರೂ ಆವರ್ತ ನಿಧಿ ಸ್ಥಾಪಿಸಬೇಕು. ಹಿರಿಯ ನಾಗರೀಕರಿಗೆ ಹಾಗೂ ವಿಕಲಚೇತನರಿಗೆ ವೃದ್ಧಾಪ್ಯ ವೇತನ ಮತ್ತು ವಿಕಲ ಚೇತನರ ವೇತನವನ್ನು ಹೆಚ್ಚಿಸಬೇಕು ಎಂಬ ತಮ್ಮ ಕನಸು ಕನಸಾಗಿಯೇ ಉಳಿಯಿತು. ಆದರೆ, ಯಾವುದೇ ಕಾರಣಕ್ಕೂ ತಮ್ಮ ಜನಪರ ಹೋರಾಟ ಎಂದೂ ನಿಲ್ಲುವುದಿಲ್ಲ. ತಮ್ಮ ಕೊನೆಯುಸಿರು ಇರುವವರೆಗೂ ರಾಜ್ಯದ ಹಾಗೂ ರಾಜ್ಯದ ಜನತೆಯ, ವಿಶೇಷವಾಗಿ ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು, ಹಿಂದುಳಿದ ವರ್ಗದವರು ಹಾಗೂ ಎಲ್ಲಾ ವರ್ಗಗಳ ದುರ್ಬಲರ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವುದಾಗಿ ತಮಗೆ ಅಧಿಕಾರ ಲಭಿಸಲಿ ಅಥವಾ ಲಭಿಸದೇ ಇರಲಿ ರಾಜ್ಯದ ಜನರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಡುವುದಾಗಿ ಯಡಿಯೂರಪ್ಪ ಅವರು ಭಾವುಕರಾಗಿ ನುಡಿದರು.

ಕೆಲವರ ತಂತ್ರದಿಂದ ಪ್ರಜಾಪ್ರಭುತ್ವಕ್ಕೆ ಇಂದು ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಹುದ್ದೆಗೆ ತಾವು ರಾಜೀನಾಮೆ ಸಲ್ಲಿಸುವಂತಾಗಿದೆ. ಆದರೆ, ತಮ್ಮ ಕೈ-ಕಾಲು ಗಟ್ಟಿ ಇರುವವರೆಗೂ ಕನಿಷ್ಠ ಮುಂದಿನ ಹತ್ತು ವರ್ಷಗಳು ಹೋರಾಟದ ಬದುಕನ್ನು ಮುಂದುವರೆಸುವುದಾಗಿ ಯಡಿಯೂರಪ್ಪ ಅವರು ತಮ್ಮ ಹೋರಾಟ ಛಲವನ್ನು ಅನಾವರಣಗೊಳಿಸಿದರು. ಅಂತೆಯೇ, ವಿಶ್ವಾಸ ಮತ ಯಾಚಿಸದೆಯೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ತಮ್ಮ ಇಂಗಿತವನ್ನು ಸದನದಲ್ಲಿ ಬಹಿರಂಗವಾಗಿ ಪ್ರಕಟಿಸಿ ಮೌನಕ್ಕೆ ಶರಣಾದರು. ನಂತರ, ರಾಜ್ಯ ವಿಧಾನ ಸಭೆಯ ಹಂಗಾಮಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಸದನದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

Leave a Reply

Your email address will not be published.

Dhyeya

Contact Us

Dhyeya Media Pvt. Ltd.
#50, 1st Floor, Acharya Arcade, 4th Cross,
1st Block, 3rd Phase, Banashankari 3rd Stage,
Bengaluru – 560 085